ಹುಬ್ಬಳ್ಳಿ,ಜೂ14: ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಸಬಹುದು. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರ ಬರುವುದಿಲ್ಲ ಈ ನಿಟ್ಟಿನಲ್ಲಿ ಎಲ್ಲರೂ ರಕ್ತದಾನ ಮಾಡಿ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಬಿ. ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನದ ನಿಮಿತ್ತವಾಗಿ ಷಾ ಧಾಮಜಿ ಜಾಧವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವತಿಯಿಂದ ನಗರದ ರಾಷ್ಟ್ರೋತ್ಥಾನ ಕೇಂದ್ರದ ವತಿಯಿಂದ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದಾನ ಮಾಡಿದರೆ 1 ವಾರ ವ್ಯಾಯಾಮ ಮಾಡಿದಷ್ಟು ಅನುಭವವಾಗುತ್ತದೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೇ ಎಲ್ಲ ಸಂದರ್ಭದಲ್ಲಿಯೂ ರಕ್ತದ ಮಹತ್ವ ಅಪಾರವಾಗಿದ್ದು, ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ರಕ್ತದ ಬೆಲೆ ಗೊತ್ತಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡಿ ಎಂದು ಅವರು ಸಲಹೆ ನೀಡಿದ ಅವರು, ಬ್ಲಡ್ ಬ್ಯಾಂಕ್ ಗಳು ಸ್ಟೋರ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಪೂರೈಕೆ ಮಾಡಬಹುದಾಗಿದೆ. ಈ ಮೂಲಕ ರಕ್ತದಾನ ಕಾರ್ಯಕ್ಕೆ ಎಲ್ಲರೂ ಜೋಡಿಸೋಣ ಎಂದರು.
ಹು-ಧಾ ಸೆಂಟ್ರಲ್ ಶಾಸಕರಾದ ಮಹೇಶ್ ಟೆಂಗಿನಕಾಯಿ ಮಾತನಾಡಿ, ವಿದ್ಯಾರ್ಥಿಗಳೇ ನಿಮ್ಮ ಜನ್ಮದಿನದ ಸಂದರ್ಭದಲ್ಲಿ ಕನಿಷ್ಠ ನೀವು ನಿಮ್ಮ ಮಿತ್ರರು ಸೇರಿ ಇದೇ ರಾಷ್ಟ್ರೋತ್ಥಾನದಲ್ಲಿ ರಕ್ತದಾನ ಮಾಡಿ, ಅಲ್ಲದೇ ರಕ್ತದಾನ ಮಾಡುವುದರಿಂದ ಇತರರಿಗೂ ನೀವು ಪ್ರೇರಣೆಯಾಗಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಉದ್ಯಮಿಗಳಾದ ಡಾ. ವಿ.ಎಸ್. ವಿ. ಪ್ರಸಾದ್, ನಂದಕುಮಾರ್, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ರಘುರಾಮ, ಗೋವಿಂದ್ ಜೋಶಿ, ದತ್ತಮೂರ್ತಿ ಕುಲಕರ್ಣಿ, ವೀರೇಂದ್ರ ಛೇಡಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.