ರಕ್ತದಾನದಿಂದ ಆರೋಗ್ಯಯುತ ಜೀವನ

ಬ್ಯಾಡಗಿ,ಜು.21:ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಸಿಪಿಐ ಬಸವರಾಜ್ ಹೇಳಿದರು.
ಪಟ್ಟಣದ ಶ್ರೀದುರ್ಗಾದೇವಿ ದೇವಸ್ಥಾನದ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರಕ್ತಕೇಂದ್ರ ಹಾವೇರಿ, ಜೆಸಿಐ ರೆಡ್ ಚಿಲ್ಲಿ ಬ್ಯಾಡಗಿ, ಹೊನ್ನಮ್ಮನವರ ಸಹೋದರರು ಮತ್ತು ಬಂಧುಮಿತ್ರರ ಸಹಯೋಗದಲ್ಲಿ ಶಿಕ್ಷಕ ದಿ.ಮಂಜುನಾಥ ಗುಡ್ಡಪ್ಪ ಹೊನ್ನಮ್ಮನವರ ಅವರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತಕ್ಕೆ ಪರ್ಯಾಯ ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರಲ್ಲದೇ, ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಂಜುನಾಥ ಅವರು ಮಕ್ಕಳ ನೆಚ್ಚಿನ ಗುರುವಾಗಿದ್ದಾರೆ. ಆದರೆ ವಿಧಿಲೀಲೆ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡಿದ್ದು ದುರ್ದೈವದ ಸಂಗತಿ. ಅವರ ಕುಟುಂಬಸ್ಥರು, ಮಿತ್ರರೆಲ್ಲರೂ ಸೇರಿ ಅವರ ಹೆಸರಲ್ಲಿ ಸಮಾಜಮುಖಿ ಕಾರ್ಯಕ್ಕೆ ಚಿಂತನೆ ನಡೆಸಿರುವುದು ಅಭಿನಂದನಾರ್ಹ ಎಂದರು.
ಮಾಜಿ ಸೈನಿಕರಾದ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಿಂದ ಪ್ರಾಣ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರಕ್ತದಾನ ಇತರರಿಗೆ ಮರುಜನ್ಮನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ ಎಂದು ತಿಳಿಸಿದರು.
ಜೆಸಿಐ ರೆಡ್ ಚಿಲ್ಲಿಯ ಅಧ್ಯಕ್ಷ ಮಲ್ಲೇಶ ಭಂಡಾರಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿಯೇ ಅಕಾಲಿಕ ಮರಣ ಹೊಂದಿದ ಮಂಜುನಾಥ ಅವರು ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ ಮನ ಗೆದ್ದಿದ್ದಾರೆ. ಅವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಕುಟುಂಬ ವರ್ಗ ಮತ್ತು ಬಂಧುಮಿತ್ರರು ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಪುರಸಭಾ ಮುಖ್ಯಾಧಿಕಾರಿ ಏಸು ಬೆಂಗಳೂರ, ಪಿಎಸ್’ಐ ಮಂಜುನಾಥ ಕುಪ್ಪೆಲೂರ, ಪುರಸಭೆ ಸದಸ್ಯರಾದ ಹನುಮಂತಪ್ಪ ಮ್ಯಾಗೇರಿ, ಸುಭಾಷ್ ಮಾಳಗಿ, ಗ್ರಾಮಲೆಕ್ಕಾಧಿಕಾರಿ ಗುಂಡಪ್ಪ ಹುಬ್ಬಳ್ಳಿ, ಆರೋಗ್ಯ ಇಲಾಖೆಯ ರಾಮಣ್ಣ ಕಟ್ಟಿ, ಶಶಿಧರ, ಬಸವರಾಜ, ಮಹ್ಮದರಫೀಕ್ ಹಕೀಮ್, ಫಕ್ಕಿರೇಶ ಹೊನ್ನಮ್ಮನವರ, ದುರ್ಗೇಶ್ ಹೊನ್ನಮ್ಮನವರ, ವಿಜಯ ಮಾಳಗಿ, ಸುರೇಶ ಹೊನ್ನಮ್ಮನವರ, ಮಾಲತೇಶ ಹಳ್ಳಿ, ಸಂತೋಷ ಹೊನ್ನಮ್ಮನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.