ರಂಜಾನ್ ಹಬ್ಬವು ಶ್ರದ್ಧಾ ಭಕ್ತಿಯ ಪ್ರತೀಕ : ಲಕ್ಷ್ಮಣ ಸವದಿ

ಅಥಣಿ :ಏ.12: ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ಶಾಂತಿ, ಸಹೋದರತೆ, ಏಕತೆ, ಪರಸ್ಪರ ಸಹಕಾರ ಹಾಗೂ ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಮೌಲ್ಯಾಧಾರಿತ ಸಂದೇಶ ಸಾರುವ ಹಬ್ಬವಾಗಿದೆ. ಬಾರತ ವಿವಿಧತೆಯಲ್ಲಿ ಏಕತೆಯ ದೇಶವಾಗಿದೆ. ಇಂತಹ ಪವಿತ್ರವಾದ ಧಾರ್ಮಿಕ ಹಬ್ಬಗಳು ದೇಶದಲ್ಲಿ ಸಮಾನತೆ ಭ್ರಾತೃತ್ವಕ್ಕೆ ಪ್ರೇರಣೆಯಾಗಲಿ ಎಂದರು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದ ಆವರಣಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳನ್ನ ಕೋರಿ ಮಾತನಾಡುತ್ತಿದ್ದರು.
ರಂಜಾನ್ ಹಬ್ಬವು ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ. ಸಹೋದರತ್ವ ಹಾಗೂ ಸೌಹಾರ್ದತೆ ನೆಲೆಗೊಳ್ಳಲಿ, ಸಹಬಾಳ್ವೆ, ಸಮಾನತೆ ಹಾಗೂ ಏಕತೆಯ ಸಮಾಜದ ನಿರ್ಮಾಣಕ್ಕೆ ಪ್ರೇರಣಾದಾಯಕ ಹಬ್ಬವಾಗಿದೆ. ಮುಸ್ಲಿಂ ಬಾಂಧವರು ಮೂವತ್ತು ದಿನಗಳ ಕಠಿಣ ಉಪವಾಸದ ನಂತರ ದೇಶಾದ್ಯಂತ ರಂಜಾನ ಹಬ್ಬವನ್ನು ಅತ್ಯಂತ ಶೃದ್ಧಾ ಭಕ್ತಿಯಿಂದ, ಸಂಭ್ರಮ ಸಡಗರದೊಂದಿಗೆ ಆಚರಿಸುವ ಪಾವನ ಹಬ್ಬವಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ವಿಶ್ವವನ್ನು ಗೆದ್ದಿರುವ ಪ್ರವಾದಿಯವರ ಬೋಧನೆ ಎಲ್ಲರಿಗೂ ಮಾರ್ಗದರ್ಶಿಯಾಗಲಿ’ ಎಂದರು.
ಈದ್ಗಾ ಮೈದಾನಕ್ಕೆ ಆಗಮಿಸಿದ ಸಾವಿರಾರು ಮುಸ್ಲಿಂ ಬಾಂಧವರು ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡರು.
ತಾಲ್ಲೂಕಿನಾದ್ಯಂತ ಮುಸ್ಲಿಮರು ಗುರುವಾರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕಳೆದ 30 ದಿನಗಳಿಂದ ನಡೆಸುತ್ತಿದ್ದ ಉಪವಾಸವನ್ನು ಕೊನೆಗೊಳಿಸಿದರು.
ಬಡವರು, ಶ್ರೀಮಂತರು ಎನ್ನದೆ ಪ್ರತಿಯೊಬ್ಬರೂ ಹೊಸ ಹೊಸ ಉಡುಗೆಗಳನ್ನು ತೊಟ್ಟು ಬೆಳಿಗ್ಗೆ 9.30ಕ್ಕೆ ಅನಂತಪುರ ರಸ್ತೆಗೆ ಹೊಂದಿಕೊಂಡಿರುವ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ್ (ಪ್ರಾರ್ಥನೆ) ಸಲ್ಲಿಸಿದರು ಧರ್ಮಗುರು ಮೌಲಾನಾ ಅಬ್ದುಲ್ ಸಲಾಂ ಹಾಗೂ ಮುಫ್ತಿ ಹಬಿಬುಲ್ಲಾ ಕಾಸ್ಮಿ ರಂಜಾನ್ ಬಗ್ಗೆ ಉಪನ್ಯಾಸ ನೀಡಿ ಈದ್ ಸಂದೇಶ ಮತ್ತು ಪ್ರವಚನ ನೀಡಿದರು. ‘ಇಸ್ಲಾಂನಲ್ಲಿ ಅಶಾಂತಿ, ಹಿಂಸೆಗೆ ಜಾಗವಿಲ್ಲ. ದೇಶದ ಪ್ರತಿಯೊಂದು ಧರ್ಮದ ಜನರು ಸಹೋದರರಂತೆ ಬಾಳಬೇಕು’ ಎಂದರು.
ಈ ವೇಳೆ ಧರ್ಮ ಗುರುಗಳಾದ ಮುಫ್ತಿ ಹಬಿಬುಲ್ಲಾ ಕಾಸ್ಮಿ, ಯುವ ನಾಯಕ ಚಿದಾನಂದ ಸವದಿ. ಅಂಜುಮನ್ ಕಮಿಟಿ ಅಧ್ಯಕ್ಷ ಸೈಯದಅಮೀನ್ ಗದ್ಯಾಳ. ಯೂನುಸ್ ಮುಲ್ಲಾ, ಸಲಾಂ ಕಲ್ಲಿ. ಆಸೀಫ್ ತಾಂಬೋಳಿ. ಮುಸ್ತಾಕ್ ಮುಲ್ಲಾ. ಫೈಸಲ್ ಮೋಮಿನ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.