ರಂಜಾನ್ ಮಾಸವು ಮಾನವ ಬದುಕಿನ ಶುದ್ದಿಯ ಮಾಸ


ಸಂಜೆವಾಣಿ ವಾರ್ತೆ
ಸಂಡೂರು: ಏ:12:  ರಂಜಾನ್ ಮಾಸವು ಮಾನವ ಬದುಕಿನ ಶುದ್ದಿಯ ಮಾಸವಾಗಿದೆ, ಈ ಮಾಸದಲ್ಲಿ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ಕಲ್ಮ ಓದುವುದು, ನಮಾಜ್ ಮಾಡುವುದು, ಉಪವಾಸ ಆಚರಿಸುವುದು ಝಕಾತ್ ಕೊಡುವುದು, ಬದುಕಿನಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡುವ ಮೂಲಕ ಅಲ್ಲಾನ ಕೃಪೆಗೆ ಪಾತ್ರರಾಗಬೇಕು ಎಂದು ಉಮರ್ ಮಸೀದಿಯ ಮೌಲ್ವಿಗಳು ಅವರು ತಿಳಿಸಿದರು.
ಅವರು ಪಟ್ಟಣದ ಸುಭಾಷ್‍ನಗರದ ಈದ್ಗಾಮೈದಾನದಲ್ಲಿ ಹಮ್ಮಿಕೊಂಡಿದ್ದ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನಾ ಸಂದರ್ಭದಲ್ಲಿ ನಮಾಜ್ ಸಲ್ಲಿಸಿ ನಂತರ ಮಾತನಾಡಿರಂಜಾನ್ ಪ್ರಾರ್ಥನೆಯಿಂದ ಮನಸು ಶುದ್ದವಾಗುತ್ತದೆ, ಇದರಿಂದ ಬದುಕಿನಲ್ಲಿ ಬರುವ ತೊಂದರೆಗಳು ನಿವಾರಣೆಯಾಗುವುದರ ಜೊತೆಗೆ ಅಲ್ಲಾಹುನ ಕೃಪೆಗೆ ಪಾತ್ರರಾಗುತ್ತೇವೆ, ವೈಜ್ಞಾನಿಕವಾಗಿಯೂ ಸಹ ದೇಹದ ಶುದ್ದಿ ನಡೆಯುತ್ತದೆ,
ಕುರಾನ್ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ಐದು ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಿತ್ಯ ನಮಾಜ್ ಸಲ್ಲಿಕೆ, ರಂಜಾನ್ ತಿಂಗಳಿನಲ್ಲಿ ವಿಶೇಷವಾಗಿ ಉಪವಾಸ ಆಚರಣೆ, ಪ್ರಾರ್ಥನೆ ಸಲ್ಲಿಕೆ, ತಾನು ಗಳಿಸಿದ ಆದಾಯದಲ್ಲಿ ದಾನಧರ್ಮಗಳನ್ನು ಮಾಡಬೇಕು, ಬದುಕಿನಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಬೇಕು. ಈ ಅಂಶಗಳನ್ನು ಅಳವಡಿಸಿಕೊಂಡಾಗ ನಮಗೆ ಯಾವುದೇ ರೀತಿಯ ವ್ಯಾಮೋಹಗಳು ಅಗದೇ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ, ಅದ್ದರಿಂದ ಸಾಮೂಹಿಕ ಪ್ರಾರ್ಥನೆ ಒಂದೇ ಎಂಬ ತತ್ವ, ಏಕದೇವ ಉಪಾಸನೆ, ಸಾಮರಸ್ಯ ದ ಸಂಕೇತ ವಾಗುತ್ತದೆ, 1 ತಿಂಗಳುಗಳ ಕಾಲ ಉಪವಾಸ ಆಚರಿಸಿ ಇಂದು ಮುಕ್ತಾಯ ಮಾಡುವ ಮೂಲಕ ಅಲ್ಲಾಹುನ ಕೃಪೆಗೆ ಪಾತ್ರರಾಗೋಣ ಎಂದರು.
ಈದ್ಗಾಮೈದಾನದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖಂಡರಾದ ರೋಷನ್ ಜಮೀರ್,ಸಿ.ಹಸೇನ್, ಸಿರಾಜ್ ಶೇಖ್, ತಾಜ್‍ಫಕೃದ್ದೀನ್,ಪುರಸಭೆಯ ನೂತನ ಸದಸ್ಯ ಸಿರಾಜ್, ಜಮೀರ್, ಇತರ ಹಲವಾರು ಗಣ್ಯರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಪ್ರಾರ್ಥನೆಯ ನಂತರ ಪ್ರತಿಯೊಬ್ಬರೂ ಸಹ ದಾನವನ್ನು ಮಾಡಿದರು, ಅಲ್ಲದೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಶುಭಾಷಯಕೋರಿದರು.