ರಂಜಾನ್ ಉಪವಾಸ ಹಿನ್ನೆಲೆ: ಕಂಟೈನ್ಮೆಂಟ್ ಜೋನ್ ಮಸೀದಿಗಳಿಗೆ ಬೀಗ

ಬೆಂಗಳೂರು, ಎ.13- ರಂಜಾನ್ ಉಪವಾಸ ವ್ರತಾಚರಣೆ ಇಂದಿನಿಂದ ಆರಂಭವಾಗಿರುವ ಹಿನ್ನೆಲೆ ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಕೋವಿಡ್ ಎರಡನೇ ಅಲೆ ಕಾಣರದಿಂದಾಗಿ ರಾಜ್ಯ ಸರ್ಕಾರ ಉಪವಾಸ ಆಚರಣೆ ಕುರಿತು ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮುಖ್ಯವಾಗಿ ಕಂಟೈನ್ಮೆಂಟ್ ಜೋನ್ ನಲ್ಲಿರುವ ಮಸೀದಿಗಳನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಿರಬೇಕು. ಉಳಿದ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ.

ಅದೇ ರೀತಿ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿಯ ಬಾಗಿಲು ತೆರೆಯಬೇಕು. ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ಹೇಳಲಾಗಿದೆ.

ನಮಾಜ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಪ್ರತಿದಿನದ ಇಫ್ತಿಯಾರ್ ಕೂಟಕ್ಕೆ ಅವಕಾಶ ಇರುವುದಿಲ್ಲ. ಮನೆಯಲ್ಲಿಯೇ ಇಫ್ತಿಯಾರ್ ಕೂಟ ಆಯೋಜಿಸಬಹುದು.

ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ. ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು. ಪ್ರಾರ್ಥನೆಗೆ ಸ್ವಂತ ಜಮಖಾನ ಮಾತ್ರ ಬಳಸಬೇಕು ಎಂದು ಹೇಳಲಾಗಿದೆ.

ಶುಕ್ರವಾರದ ವಿಶೇಷ ಪ್ರಾರ್ಥನೆಯು ಖುದ್ಬಾ(ಸೆರ್ಮಾನ್) ಆದಷ್ಟು ಸಂಕ್ಷಿಪ್ತವಾಗಿ ಮುಗಿಸಿ, ಪ್ರಾರ್ಥನೆಯನ್ನು 12:45 ರಿಂದ 1:15 ವೇಳೆಯಲ್ಲಿ ಪೂರ್ಣಗೊಳಿಸಬೇಕು. ಶೌಚಾಲಯಗಳನ್ನು ಶುಚಿಯಾಗಿರಿಸಬೇಕು ಹಾಗೂ ಅನಿವಾರ್ಯತೆ ಇದ್ದಲ್ಲಿ ಮಾತ್ರ ಬಳಸಬೇಕು. ಮಸೀದಿಗೆ ಆಹಾರ ತರಬಾರದು ಎಂದು ಆದೇಶ ಪತ್ರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ತಿಳಿಸಿದ್ದಾರೆ.