ರಂಜಾನ್ ಉಪವಾಸ ಆರಂಭ

ಬೆಂಗಳೂರು, ಮಾ.೨೪- ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ (ಈದ್ ಉಲ್ ಫಿತರ್) ಮಾಸದ ಉಪವಾಸ ಇಂದಿನಿಂದ ಆರಂಭಗೊಂಡಿದ್ದು, ಒಂದು ತಿಂಗಳ ಕಾಲ ಉಪವಾಸ ಆಚರಣೆ ನಡೆಯಲಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಎಲ್ಲ ಮುಸ್ಲಿಮರು ನಿತ್ಯ ಬೆಳಿಗ್ಗೆ ೩.೩೦ ಗಂಟೆಗೆ ಶಹರಿ ರಂಜಾನ್ ಆಚರಣೆಯಿಂದ ದಿನದ ಕಾಯಕ ಪ್ರಾರಂಭ ಮಾಡುತ್ತಾರೆ. ಈ ಬಾರಿ ಸುಡು ಬೇಸಿಗೆಯಲ್ಲೇ ಬಂದಿದ್ದು, ಒಂದು ತಿಂಗಳ ವ್ರತಾಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಸೀದಿಗಳು ಕೂಡ ಸಜ್ಜಾಗಿವೆ.
ಸೂರ್ಯೋದಯಕ್ಕಿಂತ ಮುನ್ನ, ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡಲಾಗುತ್ತದೆ. ಏಳು ವರ್ಷದೊಳಗಿನ ಮಕ್ಕಳು, ಅನಾರೋಗ್ಯ ಪೀಡಿತರು, ಅಶಕ್ತರಿಗೆ ಮಾತ್ರ ಉಪವಾಸದಿಂದ ವಿನಾಯಿತಿ ಇರಲಿದೆ.
ಬೆಳಿಗ್ಗೆ ೫ ಗಂಟೆಗೆ, ಮಧ್ಯಾಹ್ನ ೧.೩೦, ಸಂಜೆ ೫ ಗಂಟೆ, ೬?೩೦, ರಾತ್ರಿ ೮ ಗಂಟೆ ಹೀಗೆ ದಿನಕ್ಕೆ ೫ ಬಾರಿ ನಮಾಜ್ ಮಾಡುವುದು ವಿಶೇಷ. ೭ ವರ್ಷದ ಮಕ್ಕಳಿಂದ ವಯೋವೃದ್ಧರು ಎಲ್ಲರ ಮುಖದಲ್ಲಿ ಆನಂದದ ಕಳೆ ತುಂಬಿ ತುಳುಕುತ್ತದೆ. ಶಾಬಾನ್ ತಿಂಗಳ ಕೊನೆಯಲ್ಲಿ ಎಲ್ಲರ ದೃಷ್ಟಿ ಆಕಾಶದತ್ತ ನೆಟ್ಟಿರುತ್ತದೆ. ಕವಿದಿರುವ ಮೋಡಗಳ ನಡುವೆ ಬಾಲಚಂದ್ರನ ಮಿಂಚು ನೋಟಕ್ಕಾಗಿ ಕಾದಿರುತ್ತಾರೆ.
ಉಪವಾಸದ ದಿನಗಳಲ್ಲಿ ಸಂಜೆ ೬.೪೫ಗಂಟೆಯ ನಂತರವೇ ಊಟ ಮಾಡುತ್ತಾರೆ. ಸಮೋಸ ಮತ್ತು ಖರ್ಜೂರಗಳನ್ನು ವಿಶೇಷವಾಗಿ ಸೇವಿಸುತ್ತಾರೆ. ಮಸೀದಿಗಳ ರಸ್ತೆಗಳಲ್ಲಿ ವಿವಿಧ ರೀತಿಯ ಸಮೋಸ ಅಂಗಡಿಗಳು ತಲೆ ಎತ್ತಿವೆ.
ರಂಜಾನ್ ಮಾಸದಲ್ಲಿ ನಗರದ ಎಲ್ಲ ಮಸೀದಿಗಳಲ್ಲಿ ಮೌಲ್ವಿಗಳು ಮಾನವನಿಗೆ ಸನ್ಮಾರ್ಗ, ಮಾರ್ಗದರ್ಶನ ಮತ್ತು ಸತ್ಯಾಸತ್ಯತೆಗಳಲ್ಲಿರುವ ಅಂತರವನ್ನು ಮನದಟ್ಟು ಮಾಡುವ ಉಪದೇಶ ನೀಡುತ್ತಾರೆ. ಮುಸ್ಲಿಂ ಸಮುದಾಯವು ರಂಜಾನ್ ಪುಣ್ಯ ಗಳಿಕೆಯ ಮಾಸವನ್ನಾಗಿ ಪರಿಗಣಿಸುತ್ತಾರೆ. ದಾನ ಧರ್ಮಗಳು ಯಥೇಚ್ಚವಾಗಿ ನಡೆಯುತ್ತವೆ.
ಉಪವಾಸ ಆಚರಿಸುವ ಇವರು ಚಂದ್ರ ಕಂಡಕೂಡಲೇ ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಬ್ಬಕ್ಕಾಗಿ ಭರ್ಜರಿ ಖರೀದಿ ನಡೆಸುತ್ತಾರೆ. ಶ್ರೀಮಂತ ಬಡವರೆನ್ನದೆ ಎಲ್ಲ ಮುಸ್ಲಿಮರು ಹೊಸ ಉಡುಗೆ ತೊಡುಗೆಗಳಲ್ಲಿ ಮಿಂದು ತೇಲುತ್ತಾರೆ. ರಂಜಾನ್ ಮಾಸದ ಕೊನೆಯ ೧೦ ದಿನ ಕೆಲವರು ಜಾಗರಣೆ ಮಾಡುವ ಪದ್ಧತಿಯೂ ಇದೆ.
ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟಗಳಿಗೆ ಸಾಮೂಹಿಕ ಆಮಂತ್ರಣಗಳು ಸಾಮಾನ್ಯವಾಗಿರುತ್ತವೆ. ಕೂಟಗಳಿಗೆ ಎಲ್ಲ ಧರ್ಮದವರನ್ನು ಆಮಂತ್ರಿಸಲಾಗುತ್ತದೆ. ಉಳ್ಳವರು ಬಡಬಗ್ಗರಿಗೆ ಬಟ್ಟೆ ಬರೆಗಳನ್ನು ವಿತರಿಸುತ್ತಾರೆ. ಸ್ಥಿತಿವಂತರು ತಮ್ಮ ಉಳಿತಾಯದ ಸ್ವಲ್ಪ ಭಾಗವನ್ನು ಝಕಾತ್ ನೀಡುತ್ತಾರೆ. ಧರ್ಮದ ಬಡವರು ಹಬ್ಬ ಆಚರಿಸಲು ಅನುವಾಗುವಂತೆ ಕುಟುಂಬಗಳ ಮೇಲೆ ಫಿತ್ರ ಝಕಾತ್ ಕಡ್ಡಾಯವಾಗಿರುತ್ತದೆ. ಈದ್ ನಮಾಜ್ ನಿರ್ವಹಿಸುವ ಮೊದಲು ಝಕಾತ್ ಸಂದಾಯ ಮಾಡುತ್ತಾರೆ.
ಖರೀದಿ ಜೋರು: ರಂಜಾನ್ ಮಾಸದ ಉಪವಾಸ ಹಿನ್ನೆಲೆಯಲ್ಲಿ ಬಗೆಬಗೆಯ ಖರ್ಜೂರದ ಮಾರಾಟ ನಡೆಯಲಿದೆ. ಮುಸ್ಲಿಂ ಸಮುದಾಯದವರು ಗುರುವಾರ ಸಂಜೆಯೇ ಅಂಗಡಿಗಳಲ್ಲಿ ಒಣ ಹಣ್ಣು, ಹಣ್ಣು ಹಾಗೂ ಸಿಹಿ ತಿಂಡಿ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಮಾರುಕಟ್ಟೆ ಗಳಲ್ಲಿ ಖರ್ಜೂರದ ರಾಶಿ ಕಂಡು ಬರುತ್ತಿದೆ.
ಇಸ್ಲಾಂ ಅಲ್ಲದೆ ಹಿಂದು, ಬೌದ್ಧ, ಸಿಖ್ ಧರ್ಮಗಳಲ್ಲೂ ಸಹ ಉಪವಾಸವನ್ನು ಪ್ರತಿಪಾದಿಸಲಾಗಿದೆ. ಉಪವಾಸ ವ್ರತ ಕೇವಲ ಭೌತಿಕ ಆರೋಗ್ಯವನ್ನಷ್ಟೇ ಅಲ್ಲ, ಅಧ್ಯಾತ್ಮ ಸಾಧನೆಗೂ ನೆರವಾಗುತ್ತದೆ. ಕುರಾನ್ ಉಪವಾಸದ ಪ್ರಾಮುಖ್ಯ ಎತ್ತಿ ಹಿಡಿದಿದೆ.

ಪ್ರಧಾನಿ ಮೋದಿ ಶುಭಾಶಯ
ರಂಜಾನ್ ಉಪವಾಸ ಆಚರಣೆ ಪ್ರಯುಕ್ತ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ರಂಜಾನ್ ಮಾಸದ ಶುಭಾಶಯಗಳು. ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಮತ್ತು ಸಾಮರಸ್ಯವನ್ನು ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.