ರಂಜನೆ ಜೊತೆ  ಧರ್ಮ‌ ಜಾಗೃತಿ ಮೂಡಿಸುವುದು ಯಕ್ಷಗಾನ: ಸುರೇಶ್ ಶೆಟ್ಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.09: ನಗರದಲ್ಲಿ ಹೋಟೆಲ್ ಉದ್ಯಮದ ಬೆಳವಣಿಗೆಗೆ ಇಲ್ಲಿನ ಜನ ಪ್ರತಿನಿಧಿಗಳ ಸಹಕಾರ ಸದಾ ಸ್ಮರಣೀಯ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ನಿನ್ನೆ ಸಂಜೆ ನಗರದ ರಾಘವ ಕಲಾ ಮಂದಿರದಲ್ಲಿ. ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ವಾರ್ಷಿಕ ಸ್ನೇಹ ಕೂಟ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನನಗೆ ನನ್ನ ತವರು ಮನೆ ಬಳ್ಳಾರಿ, ಅನ್ನ ಅರಿವೆ ಆಶ್ರಯ ನೀಡಿದ್ದು ಬಳ್ಳಾರಿ ಎಂದರು.
ರಂಜನೆಯ ಮೂಲಕ ಧರ್ಮ‌ ಜಾಗೃತಿಯನ್ನು ಮೂಡಿಸುವುದು ಯಕ್ಷಗಾನ. ಇಂತಹ ಕಲೆಗೆ ರಾಜ್ಯದ ದೇಶದ ಎಲ್ಲಾ ಭಾಗದಲ್ಲಿ ಜನತೆ ಪ್ರೋತ್ಸಹಿಸುತ್ತಿದ್ದಾರೆ. ಬಳ್ಳಾರಿ ಜನತೆ ಸಹ ಎಂದರು.
ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮಾತನಾಡಿ, ಇಲ್ಲಿ ಹೋಟೆಲ್ ಉದ್ಯಮ ನಡೆಸಿ ಕಾಪುನಲ್ಲಿ ಶಾಸಕರಾದ ಸುರೇಶ್ ಶೆಟ್ಟಿ ಅವರ ಸಾಧನೆ ಶ್ಲಾಘನೀಯ. ನಾನು ಬಡವನಾಗಿದ್ದಾಗ ಸಹಕಾರ ನೀಡಿದ್ದ ಮಯೂರ ಹೋಟೆಲ್ ಮಧುಸೂಧನ್ ಅವರ  ಋಣ ನಮ್ಮ ಮೇಲಿದೆ.
ಅವರು ಯಾವುದೇ ಸಂದರ್ಭದಲ್ಲಿ ಋಣ ತೀರಿಸಲು ಅವಕಾಶ ಕೊಡಬೇಕು ಎಂದರು.
ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ವೈಭವವನ್ನು ಈ ಭಾಗದ ಜನತೆ ವೀಕ್ಷಣೆಗೆ ವಾರ್ಷಿಕ ಸ್ನೇಹಕೂಟದ ಕಾರ್ಯಕ್ರಮದಲ್ಲಿ ಕಲ್ಪಿಸುವ ಕೆಲಸ ಸ್ವಾಗತಾರ್ಹ ಎಂದು ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ಸಂಘದ ಅಧ್ಯಕ್ಷ ಹೆಚ್.ಎಸ್.ಮಧುಸೂಧನ್ ಪ್ರಸ್ತಾವಿಕವಾಗಿ ಮಾತನಾಡಿ. 1960 ರಲ್ಲಿ ಆರಂಭವಾದ ನಮ್ಮ ಸಂಘ ಅನೇಕ ಜನರಿಗೆ ಉದ್ಯೋಗ ನೀಡುತ್ತ. ಅನೇಕ ಸಮಾಜಿಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದೆ. ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾಪು ಶಾಸಕ ಸುರೇಶ್ ಶೆಟ್ಟಿ, ಹೋಟೆಲ್ ಉದ್ಯಮಿಗಳಾದ ತ್ರಿವಿಕ್ರಮ ಆಚಾರ್ಯ, ವಿಷ್ಣು ಮೂರ್ತಿ ಆಚಾರ್, ಪೋಲಾ ರಾಧಕೃಷ್ಣ, ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಅದೇರೀತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ, ನೃತ್ಯ ಕಲಾವಿದೆ ರಾಖಿ ಮುರುಳೀಧರ್  ಅವರನ್ನು  ಸನ್ಮಾನಿಸಿ ಗೌರವಿಸಲಾಯ್ತು.
ವೇದಿಕೆಯಲ್ಲಿ ಹೋಟೆಲ್ ಉದ್ಯಮಿಗಳಾದ ಜನಾರ್ಧನರಾವ್,  ಸೂರ್ಯಕುಮಾರ ಶೆಟ್ಟಿ,  ಮೊದಲಾದವರು ಇದ್ದರು.
ಹರೀಶ್ ಶೆಟ್ಟಿ ಸ್ವಾಗತಿಸಿದರು. ರೂಪಾ ವಂದಿಸಿದರೆ, ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ರಾಖಿ ಮರುಳಿಧರ್ ಅವರ ನೃತ್ಯ ನಿರ್ದೇಶನದಲ್ಲಿ ಮೈತ್ರೀ ಕೂಟದ ಮಹಿಳಾ ಸದಸ್ಯೆಯರಿಂದ  ಆಕರ್ಷಕ ನೃತ್ಯ ಕಾರ್ಯಕ್ರಮ ಜರುಗಿತು. ನಂತರ ಮಂದರ್ತಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಅವರಿಂದ ಶಿವಧೂತ ಪಂಜುರ್ಲಿ ಯಕ್ಷಗಾನ‌ ಪ್ರದರ್ಶನ ಆಕರ್ಷಕವಾಗಿ ನಡೆಯಿತು