ರಂಗ ಶಿಕ್ಷಕರ ನೇಮಕಕ್ಕೆ ರಂಗ ಪದವೀಧರರ ಒಕ್ಕೂಟ ಒತ್ತಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08:  ಸರ್ಕಾರಿ ಹಾಗು ಅನುದಾನಿತ ಪ್ರೌಡಶಾಲೆಗಳಲ್ಲಿ  ಮತ್ತು ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಂಗಪದವೀಧರರ ಜಿಲ್ಲಾ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ಮನವಿ ಸಲ್ಲಿಸಿದೆ.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಒಕ್ಕೂಟದ ವಿಭಾಗದ ಸಂಚಾಲಕ  ಅಣ್ಣಾಜಿ ಕೃಷ್ಣಾರೆಡ್ಡಿ, ಜಿಲ್ಲಾ ಅಧ್ಯಕ್ಷ  ಕೆ.ಹೇಮೇಶ್ವರ, ಕಾರ್ಯದರ್ಶಿ ವಿಷ್ಣು ಹಡಪದ ಮೊದಲಾದವರು. 
ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರುಗಳಿಗೆ ಪತ್ರ ಬರೆದು.
ನಾಟಕ ಎಂಬುದು ಅಭಿನಯ, ನೃತ್ಯ, ಸಂಗೀತ ಹಾಗೂ ಸಾಹಿತ್ಯಗಳನ್ನು ಒಳಗೊಂಡ ಕಲಾಮಾಧ್ಯಮವಾಗಿದೆ. ಕಲಿಕೆಯ  ಜ್ಞಾನಕ್ಕೆ ತೆಗೆದುಕೊಳ್ಳುವ ವಯಸ್ಸಿನ ಶಾಲಾ ಮಕ್ಕಳಿಗೆ ನಾಟಕ ಕಲೆಯನ್ನ ಕಲಸುವ ಮೂಲಕ ಮಾನಸಿಕ ವಿಕಾಸಕ್ಕೆ ಪ್ರೇರಣೆ ನೀಡಬಹುದಾಗಿದೆ. ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ರಂಗಶಿಕ್ಷಣ ಅಪಾರವಾದ ಕೊಡುಗೆ ಕೊಡುವುದರಲ್ಲಿ ಸಂದೇಹವೇ ಇಲ್ಲ. ರಂಗಶಿಕ್ಷಣದಿಂದ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ,  ಮಾತುಗಾರಿಕೆ, ಅಡೆತಡೆಗಳನ್ನು ಎದುರಿಸುವ ಧೈರ್ಯ ಬದುಕುವ ಕಲೆ ಹಾಗೂ ಮಾನವೀಯತೆಗಳನ್ನು ಕಲಿಸಬಹುದಾಗಿದೆ. ಆದ್ದರಿಂದ, ಶಿಕ್ಷಣದಲ್ಲಿ ರಂಗಕಲೆಯನ್ನು ಅಳವಡಿಸುವ ಮೂಲಕ ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮುಂದಿನ ತಲೆಮಾರಿನ ಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆ ತಂದು ನೈತಿಕ ಪ್ರಜ್ಞೆ ಇರುವ ಹಾಗೂ ಬದುಕಿನ ಬದ್ಧತೆ ಇರುವ ಕ್ರಿಯಾಶೀಲ ತಲೆಮಾರನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಬಹುದಾಗಿದೆ.
ಈ ಅಂಶವನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಈ ಹಿಂದಿನ ಸರ್ಕಾರ 2007-08 ರಲ್ಲಿ ಕೇವಲ 54 ರಂಗ ಶಿಕ್ಷಕರನ್ನು ಮಾತ್ರ ನೇಮಕ‌ಮಾಡಿತ್ತು. ನಂತರ ನೇಮಕಾತಿ‌ನಡೆದಿಲ್ಲ.
“ಶಾಲಾಶಿಕ್ಷಣದಲ್ಲಿ ರಂಗಕಲೆಯನ್ನು ಅಳವಡಿಸಬೇಕು, ರಂಗಕಲೆಯ ಮೂಲಕ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕು” ಎನ್ನುವುದು ಕನ್ನಡ ರಂಗಭೂಮಿಯ ಬಹುಕಾಲದ ಬೇಡಿಕೆಯಾಗಿದೆ. ಇದರಿಂದ ಶಿಕ್ಷಣ ವ್ಯವಸ್ಥೆಯ ಚಿತ್ರಣವೇ ಬದಲಾಗುವುದಲ್ಲದೇ, ರಂಗಕಲೆಯನ್ನು ಮಕ್ಕಳು ಬೆಳಸಿದಂತಾಗುತ್ತದೆ, ನೂರು ಸಲ ಓದುವುದಕ್ಕಿಂತಲೂ ಒಂದು ಸಲ ಪ್ರಾಯೋಗಿಕವಾಗಿ ನೋಡುವುದು ಹೆಚ್ಚು ಪ್ರಭಾವ ಬೀರುತ್ತದೆ. ರಂಗಕಲೆಯ ಮೂಲಕ ಶಿಕ್ಷಣವನ್ನು ಕೊಡುವುದು ಅತ್ಯಂತ ಸೂಕ್ತವೂ  ಹಾಗೂ ಸಮಯೋಚಿತವೂ ಆದ ಸಂಗತಿಯಾಗಿದೆ.
ಪ್ರೌಢಶಾಲೆಗಳಲ್ಲಿ  ರಂಗಕಲೆಯನ್ನು ಕಲಿಸಲು ರಂಗಶಿಕ್ಷಕರನ್ನು ನಿಯಮಿಸಿಕೊಳ್ಳಲು ಅನೇಕ ವರ್ಷಗಳಿಂದ ರಂಗಾಸಕ್ತರು ಹಾಗೂ ರಂಗಶಿಕ್ಷಕರು ಸರಕಾರಕ್ಕೆ ಹಲವು ಮನವಿಗಳನ್ನು ಕಾಲಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ. ರಂಗಶಿಕ್ಷಣ ಪಡೆದವರೂ ಸಹ ಹೋರಾಟಗಳನ್ನು ಹಮ್ಮಿಕೊಂಡು ಸರಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನವನ್ನೂ ಮಾಡಿದೆ. ಆದರೆ,  ಸರ್ಕಾರ ಮತ್ತು  ಶಿಕ್ಷಣ ಇಲಾಖೆಯಾಗಲಿ ಇಲ್ಲಿಯವರೆಗೂ ಈ ವಿಷಯದಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದು. ವಿಷಾಧನಿಯ ಸಂಗತಿ.
ಸಮಾಜ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿರುವ 850, ವಸತಿ ಶಾಲೆಗಳು ಕಾರ್ಯನಿರತವಾಗಿವೆ, ಈ ಶಾಲೆಗಳಲ್ಲಿ ಬಡ ಕುಟುಂಬಗಳ ಗ್ರಾಮೀಣ ಭಾಗದ  ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಇಂತಹ ಮಕ್ಕಳಿಗೆ ರಂಗಶಿಕ್ಷಕರ ಅಗತ್ಯತೆ ತುಂಬಾ ಇದೆ ರಂಗಕಲೆಯಲ್ಲಿ ಸಂಗೀತವೂ ಸಹ ಒಂದು `ಅಂಗವೇ ಆಗಿದೆ. ಸಂಗೀತ ಶಿಕ್ಷಕರ ಜೊತೆಗೆ ರಂಗಶಿಕ್ಷಕರನ್ನೂ ಸಹ ನೇಮಕಾತಿ ಮಾಡಿಕೊಳ್ಳುವುದರಿಂದ, ಶಿಕ್ಷಣ ಹಾಗೂ ರಂಗಭೂಮಿ ಎರಡೂ ಕ್ಷೇತ್ರಕ್ಕೆ ಪ್ರಯೋಜನವಾಗಲಿದೆ.
 ರಾಜ್ಯದ ಸುಮಾರು 650ಕ್ಕೂ ಹೆಚ್ಚು ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದೆ. ಈ ಶಾಲೆಗಳಲ್ಲಿಯೂ ಸಹ ರಂಗಶಿಕ್ಷಕರನ್ನು ನೇಮಿಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಗಮನಹರಿಸಿ ಈ ಶೈಕ್ಷಣಿಕ ವರ್ಷದಿಂದಲೇ ನೇಮಕಾತಿಗೆ ಆದೇಶ ನೀಡಬೇಕಿದೆ.
ಶಿಕ್ಷಣ ಸಚಿವರ ಹೇಳಿಕೆಯಂತೆ ರಾಜ್ಯದಲ್ಲಿ 2328 ಹುದ್ದೆಗಳು ಮುಂಜೂರಾಗಿದ್ದು 1253 ವಿಶೇಷ ಶಿಕ್ಷಕರು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು ಇನ್ನುಳಿದ ಖಾಲಿ ಇರುವ 1075 ಹುದ್ದೆಗಳ ಭರ್ತಿಗೆ ಕ್ರಮ ಕೈಗೋಳ್ಳುವಾಗ ನಾಟಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆ ಪ್ರಕ್ರಿಯೆಯಲ್ಲಿಯೇ ರಂಗಶಿಕ್ಷಕರನ್ನೂ ಪರಿಗಣಿಸಬೇಕೆಂದು ಒತ್ತಾಯದ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪ್ರವೀಣ್,ಮೀರಾಬಾಯಿ, ಕಾಳಿಂಗ, ಶರಣಬಸವ ಎ.ಕೆ., ಜಯಪ್ರಕಾಶ್ ಎ., ಶಂಕರ್ ಮೆಟ್ರಿ ಮೊದಲಾದವರು ಇದ್ದರು.