* ಪೋಟೋ ಡಿಜಿಟಲ್ ತಿದ್ದುಪಡಿ ಮೂಲಕ ವಂಚನೆ
* ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮ
* ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಂತೆ ಪ್ರಕಟ
* ಎರೆಡು ವರ್ಷಗಳ ನಂತರ ಪೋಟೋ ಬದಲಾವಣೆ
* ನಾಲ್ಕು ವರ್ಷದ ನಂತರ ಬಯಲಿಗೆ
ಎನ್.ವೀರಭದ್ರಗೌಡ
ಬಳ್ಳಾರಿ, ಮಾ.27: ವಿಶ್ವ ರಂಗಭೂಮಿ ದಿನಾಚರಣೆಯ ದಿನವಾದ ಇಂದು ರಂಗಭೂಮಿಯ ಕಲಾವಿದರೆ ಶುಭ ಕೋರಬೆರಕಿದೆ. ಆದರೆ ಅಂತಹ ರಂಗಭೂಮಿಯ ಹೆಸರೇಳಿಕೊಂಡು ಕಾರ್ಯಕ್ರಮಗಳನ್ನೇ ಮಾಡದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಂಚನೆ ಮಾಡತೊಡಗಿವೆ ರಂಗಭೂಮಿಯ ಸಂಘಟನೆಗಳು.
ಬಳ್ಳಾರಿಯಲ್ಲಿ ಒಂದು ಕಡೆ ಕಾರ್ಯಕ್ರಮ ಮಾಡಿದವರಿಗೆ ಇಲಾಖೆ ಸೂಕ್ತರೀತಿಯಲ್ಲಿ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ರಂಗ ಕಲಾವಿದರಿಂದ ಮನವಿ, ಪ್ರತಿಭಟನೆ.
ಮತ್ತೊಂದು ಕಡೆ ಕಾರ್ಯಕ್ರಮ ನೀಡಿದರೆ ಇಂತಿಷ್ಟು ಹಣ ಕೊಡಬೇಕೆಂದು ಕೇಳುವ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ. ಅವರು ತಪ್ಪು ಮಾಡಿದರೂ ಅಮಾನತು ಮಾಡಿದಂತೆ ನಾಟಕ ಮಾಡಿಸಿ ಮತ್ತೊಂದು ಕಡೆಗೆ ನೇಮಕ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ಮ ಕಾಂಡವಾದರೆ.
ನಾವೇನು ಕಡಿಮೆ ಇಲ್ಲವೆಂಬಂತೆ ಕೆಲ ರಂಗಭೂಮಿ ಯ ಸಂಘ ಸಂಸ್ಥೆಗಳು, ಎಲ್ಲೋ, ಎಂದೋ ನಡೆದ ಪೋಟೋಗಳನ್ನು ತೆಗೆದುಕೊಂಡು ಡಿಜಿಟಲ್ ನಲ್ಲಿ ತಿದ್ದುಪಡಿ ಮಾಡಿ ಇಲಾಖೆಗೆ ನಕಲಿ ಬಿಲ್ ಸಲ್ಲಿಸಿ ಹಣ ದೋಚುವ ಪರಿಪಾಠ ಆರಂಭವಾಗಿದೆ.
ಈ ಹಿಂದೆ ಹೀಗೆ ಮಾಡಿದ ಬಳ್ಳಾರಿಯ ಎರೆಡು ಸಂಘಗಳ ಬಗ್ಗೆ ಸಂಜೆವಾಣಿ ಈ ಹಿಂದೆ ವರದಿ ಮಾಡಿದಾಗ ಅವುಗಳನ್ನು ಇಲಾಖೆ ಅಮಾನತು ಮಾಡಿತ್ತು.
ಈಗ ಬಳ್ಳಾರಿ ವಿ.ಎಸ್.ಕೆ. ವಿಶ್ವ ವಿದ್ಯಾಲಯದಲ್ಲಿ ನಾಟಕ ಅಕಾಡೆಮಿಯ ಎಸ್ಟಿ ಯೋಜನೆಯಡಿ 2016 ರಲ್ಲಿ ನಡೆದ ರಂಗ ತರಬೇತಿಯ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನದ ಪೋಟೋಗಳನ್ನು ತೆಗೆದುಕೊಂಡು.
ಅವುಗಳನ್ನು ಡಿಜಿಟಲ್ ಫೋಟೋದಲ್ಲಿ ತಿದ್ದಿ ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2018ರಲ್ಲಿ ಬಸವೇಶ್ವರ ನಾಟಕ ಸಂಘ ತಿಮ್ಮಲಾಪುರದ ಹೆಸರಲ್ಲಿ ತಮ್ಮೇನಹಳ್ಳಿಯಲ್ಲಿ ನಾಟಕ ಮತ್ತು ಜಾನಪದ ನೃತ್ಯ ಪ್ರದರ್ಶನವಾದಂತೆ ಸೃಷ್ಟಿ ಮಾಡಿ ಹಣ ವಂಚನೆ ಮಾಡಲಾಗಿದೆ.
ಫೋಟೋದಲ್ಲಿ ಅಂದಿನ ನಾಟಕ ಅಕಾಡೆಮಿ ಸದಸ್ಯ ಚಿತ್ರದುರ್ಗದ ಸಿದ್ಧಯ್ಯ, ವಿ ಎಸ್ ಕೆ ರಿಜಿಸ್ಟ್ರಾರ್ ಭಾಸ್ಕರ್, ಪ್ರೊ.ಶಾಂತನಾಯಕ, ಬಳ್ಳಾರಿ ನಾಟಕ ಅಕಾಡೆಮಿ ಸದಸ್ಯೆ ಕಲಾವಿದೆ ವರಲಕ್ಷ್ಮಿ, ಕಳೆದ ವರ್ಷ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ಗಂಗಣ್ಣ ಇದ್ದಾರೆ.
ಈ ಬಗ್ಗೆ ತನಿಖೆ ಆದಲ್ಲಿ ಅಲ್ಲಿ ಇನ್ನೂ ಹಲವಾರು ಇಂತಹ ಬೋಗಸ್ ಪ್ರದರ್ಶನ ಮತ್ತು ಹಣ ಲಪಟಾಯಿಸಿರುವುದು ಬೆಳಕಿಗೆ ಬರಬಹುದು.
ರಂಗಕರ್ಮಿ
ಕೆ.ಜಗದೀಶ್ ಬಳ್ಳಾರಿ,