ರಂಗೋಲಿಯಲ್ಲಿ ಮೂಡಿದ ಮತದಾನ ಜಾಗೃತಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.29:- ಲೋಕಸಭಾ ಚುನಾವಣೆ 2024 ರ ಹಿನ್ನೆಲೆ ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮ ಪಂಚಾಯಿತಿ ದೇಬೂರು ಗ್ರಾಮದಲ್ಲಿ ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದ್ದಾರೆ.
ದೇಬೂರು ಗ್ರಾಮದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲದ ಮುಂಭಾಗದ ರಸ್ತೆಯಲ್ಲಿ ಗ್ರಾಮದ ಸ್ವ- ಸಹಾಯ ಸಂಘದ ಮಹಿಳಯರು ಸೇರಿದಂತೆ ಇತರರು ಬಣ್ಣದ ಬಣ್ಣದ ರಂಗೋಲಿಗಳೊoದಿಗೆ ಮತದಾನ ಜಾಗೃತಿ ಘೋಷವಾಕ್ಯಗಳನ್ನು ಬಿಡಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಿದರು.
ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಮತವು ಅತ್ಯಮೂಲ್ಯವಾಗಿದ್ದು, ಯಾರೊಬ್ಬರು ಮತದಾನದಿಂದ ಹೊರಗೊಳಿಯದೆ ತಮ್ಮ ಸಂವಿಧಾನದ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು. ಹಾಗೂ ಚುನಾವಣೆ ಸಂಬoಧ ಯಾವುದೇ ದೂರುಗಳಿದ್ದಲ್ಲಿ ಸಿ-ವಿಜಿಲ್ ಆಪ್ ಮೂಲಕ ಸಲ್ಲಿಸುವಂತೆ ತಿಳಿಸಿದರು. ಬಳಿಕ ಅತ್ಯುತ್ತಮವಾಗಿ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಿದರು.
ವೇದಿಕೆ ಕಾರ್ಯಕ್ರಮ ಬಳಿಕ ಮತದಾನ ಪ್ರಚಾರ ವಾಹನದೊಂದಿಗೆ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಮಹಿಳೆಯರು, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಮತದಾನದ ಮಹತ್ವ ಸಾರಿದರು.