ರಂಗೋಲಿಯಲ್ಲಿ ಮತದಾನ ಜಾಗೃತಿ

ಬಾಗಲಕೋಟೆ,ಏ.22 : ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವನಗರದ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗದ ಬಾಲಕಿಯರ ವಸತಿ ನಿಲಯದಲ್ಲಿ ಅಣಕು ಮತಗಟ್ಟೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮತದಾನ ಜಾಗೃತಿಗಾಗಿ ಏರ್ಪಡಿಸಿದ ಅಣಕು ಮತಗಟ್ಟೆ ಪ್ರಾತ್ಯಕ್ಷಿಕೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಪ್ರಿಸೆಂಡಿಂಗ್ ಅಧಿಕಾರಿಗಳ ವರೆಗೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಣಕು ಮತಗಟ್ಟೆಯಲ್ಲಿ ವಿದ್ಯಾರ್ಥಿಗಳು ಹಿರಿಯರ, ಮುದುಕಿಯರ, ವಿಕಲಾಂಗರ ವೇಷಭೂಷಣ ಧರಿಸುವದರ ಜೊತೆಗೆ ನಟನೆ ಮಾಡುವ ಮೂಲಕ ಸರತಿ ಸಾಲಿನಲ್ಲಿ ನಿಂತುಕೊಂಡು ಅಣಕು ಮತದಾನ ಮಾಡಿದರು. ಮತಗಟ್ಟೆಯಲ್ಲಿಯ ಪ್ರತಿಯೊಂದು ಪ್ರಕ್ರಿಯೆಯನ್ನು ಅಣಕು ಪ್ರಾತ್ಯಕ್ಷಿಕೆಯಲ್ಲಿ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹನಮರಟ್ಟಿ, ತಾಲೂಕಾ ಸಹಾಯಕ ನಿರ್ದೇಶಕಿ ಸೈರಾಬಾನು ನದಾಫ್ ಅಣಕು ಮತಗಟ್ಟೆಯಲ್ಲಿ ಮತದಾನ ಮಾಡಿ ಗಮನ ಸೆಳೆದರು. ಅಣಕು ಮತಗಟ್ಟೆ ಪ್ರಾತ್ಯಕ್ಷಿಕೆ ಪೂರ್ವದಲ್ಲಿ ವಸತಿ ನಿಲಯದಲ್ಲಿ ಮತದಾನ ಜಾಗೃತಿಯ ರಂಗೋಲಿ ಬಿಡಿಸಿದ್ದು ಗಮನ ಸೆಳೆಯಿತು. ತಪ್ಪದೇ ಮತದಾನ ಮಾಡುತ್ತೇನೆ. ಕೈಗೊಂಬೆ ಆಗದಿರಿ ನಿಮ್ಮ ಮತ ನಿಮ್ಮ ಸ್ವಂತ ನಿರ್ಧಾರ, ಪ್ರಜಾಪ್ರಭುತ್ವದ ಸಾರುವ ಚಿತ್ತಾರ ಮೂಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿ.ಪಂ ಯೋಜನಾಧಿಕಾರಿ ಸಿ.ಆರ್.ಮುಂಡರಗಿ ಮಾತನಾಡಿ ನಮ್ಮದು ಪ್ರಜಾಪ್ರಭುತ್ವ ದೇಶವಿರುವದರಿಂದ ಪ್ರಜಾ ಪ್ರತಿನಿಧಿಗಳನ್ನು ಆರಿಸಿಕಳುಹಿಸಬೇಕಾಗಿದೆ. ಪ್ರತಿ 5 ವರ್ಷಗಳಿಗೊಮ್ಮೆ ಬರುವ ಈ ಪ್ರಜಾಪ್ರಭುತ್ವದ ಚುನಾವಣಾ ಹಬ್ಬದಲ್ಲಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಯಾವುದೇ ಆಶೆ ಆಮಿಷಕ್ಕೆ ಒಳಗಾಗದೇ ನಿರ್ಭಯದಿಂದ ಮತ ಚಲಾಯಿಸುವಂತಾಗಬೇಕು. ನಿಮ್ಮ ಅಮೂಲ್ಯವಾದ ಮತದಾನದಲ್ಲಿ ದೇಶದ ಭವಿಷ್ಯ ಅಡಗಿರುತ್ತದೆ ಎಂದರು.
ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಮಾತನಾಡಿದರು. ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.