ರಂಗೋಲಿಯಲ್ಲಿ ಅರಳಿದ ತ್ರಿವರ್ಣ ಧ್ವಜ

ಭಾಲ್ಕಿ:ಆ.11: ಇಲ್ಲಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮಕ್ಕಳಲ್ಲಿ ಸ್ವಾಭಿಮಾನದ ಕಿಚ್ಚು, ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ವತಿಯಿಂದ ಶಾಲಾ ಆವರಣದಲ್ಲಿ ಗುರುವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ 8 ರಿಂದ 10ನೆಯ ತರಗತಿ ವರೆಗಿನ ವಿದ್ಯಾರ್ಥಿಗಳು ತ್ರಿವರ್ಣ ಧ್ವಜವನ್ನು ರಂಗೋಲಿಯಲ್ಲಿ ಬಿಡಿಸಿ ಗಮನ ಸೆಳೆದರು.

ವಿದ್ಯಾರ್ಥಿಗಳು ಆಸಕ್ತಿಯಿಂದ ತ್ರಿವರ್ಣ ಧ್ವಜವನ್ನು ರಂಗೋಲಿಯಲ್ಲಿ ಆಕರ್ಷಕವಾಗಿ ಬಿಡಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನದಂದು ಬಹುಮಾನ ವಿತರಿಸಲಾಗುವುದು ಎಂದು ಶಾಲೆಯ ಮುಖ್ಯಗುರು ಆನಂದ ಕಲ್ಯಾಣೆ ತಿಳಿಸಿದರು.

ಶಿಕ್ಷಕಿ ಸುನಿತಾ ಸಂಗೋಳಗೆ ನಿರ್ಣಾಯಕರಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಉದಯ ಜೋಶಿ, ಪ್ರಕಾಶ ರುದನೂರ್, ದಿಲೀಪ ಘಂಟೆ, ಜಯಪ್ರಕಾಶ ಸಹಾನೆ, ಗೌರಮ್ಮ ಮಜಗೆ, ಅಂಜಲಿ ಜೋಶಿ ಇದ್ದರು.