ರಂಗೇರುತ್ತಿರುವ ವಿಧಾನ ಪರಿಷತ್ ಚುನಾವಣೆ

ಮೈಸೂರು: ನ.28:- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯಲಿದ್ದು ಮೈಸೂರು-ಚಾಮರಾಜನಗರ ಜಿಲ್ಲೆಗಳ ದ್ವಿಸದಸ್ಯ ಕ್ಷೇತ್ರದಲ್ಲಿ ಈಗಾಗಲೇ ಅಬ್ಬರದ ಪ್ರಚಾರ ನಡೆಯುತ್ತಿದ್ದು ಮತದಾರರ ಮನ ಓಲೈಸಲು ಮುಖಂಡರುಗಳು ಹಳ್ಳಿಗಳತ್ತ ದೌಡಾಯಿಸಿದ್ದಾರೆ.
ಈ ಚುನಾವಣೆಯು ಚುನಾವಣೆಯಲ್ಲಿ ಸ್ಪರ್ಧಿಸಿರುವ ಹುರಿಯಾಳುಗಳ ಗಿಂತ ನಾಯಕರುಗಳ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಾಯಕರುಗಳು ನಿನ್ನೆಯಿಂದಲೇ ಎರಡು ಜಿಲ್ಲೆಗಳ ಎಲ್ಲಾ ತಾಲೂಕುಗಳು, ಹೋಬಳಿ ಕೇಂದ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಬಹುತೇಕ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಎರಡು ಜಿಲ್ಲೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ ನಂತರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಇವರಿಬ್ಬರ ಹಠದಿಂದ ರಘು.ಆರ್. ಕೌಟಿಲ್ಯ ಅವರಿಗೆ ಪಕ್ಷದಿಂದ ಟಿಕೆಟ್ ಲಭ್ಯವಾಗಿದ್ದು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವುದು ಪ್ರಮುಖ ಗುರಿಯನ್ನಾಗಿ ಇಟ್ಟುಕೊಂಡು ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ಪಕ್ಷದ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರುಗಳ ಮನೆ ಮನೆಗೆ ಭೇಟಿ ನೀಡಿ ಅವರುಗಳ ಮನವೊಲಿಸಲು ಬದ್ಧರಾಗಿದ್ದಾರೆ.
ಮತ್ತೊಂದೆಡೆ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ರಣತಂತ್ರಗಳನ್ನು ಹೆಣೆದು ಪ್ರಚಾರಕ್ಕೆ ಇಳಿದಿದ್ದಾರೆ. ಕಳೆದೆರಡು ದಿನಗಳಿಂದ ಮೈಸೂರಿನಲ್ಲಿಯೇ ವಾಸ್ತವ್ಯ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆಗಳನ್ನು ನಡೆಸಿ ಎಲ್ಲರೂ ಒಗ್ಗಟ್ಟಿನ ಮನೋಭಾವದಿಂದ ಕರ್ತವ್ಯ ನಿರ್ವಹಿಸುವಂತೆ ಸ್ಥಳೀಯ ಶಾಸಕರು ಮಾಜಿ ಶಾಸಕರು ಗಳಿಗೆ ಜವಾಬ್ದಾರಿಯನ್ನು ವಹಿಸಿದ್ದಾರೆ ಪ್ರಚಾರದ ವೇಳೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಅಂತಿಮ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಸಿಗಬಹುದೆಂದು ಆಸೆ ಇಟ್ಟುಕೊಂಡಿದ್ದ ಸಿ.ಎನ್ ಮಂಜೇಗೌಡ ರವರು ಜಾತ್ಯತೀತ ಜನತಾ ದಳಕ್ಕೆ ನೆಗೆದು ಆ ಪಕ್ಷದ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶ್ರೀರಕ್ಷೆ ಎಂದರೆ ಅತಿಶಯೋಕ್ತಿ ಏನಲ್ಲ. ಮಂಜೇಗೌಡರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಹೊಸಬರಾಗಿದ್ದು ಮಾಜಿ ಸಚಿವ ಸಾ.ರಾ ಮಹೇಶ್, ಶಾಸಕರುಗಳಾದ ಕೆ.ಮಹಾದೇವ, ಎಂ.ಅಶ್ವಿನ್ ಕುಮಾರ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ರವರು ಸದ್ಯಕ್ಕೆ ತಟಸ್ಥರಾಗಿ ಉಳಿದಿರುವುದು ಜಾತ್ಯತೀತ ಜನತಾ ದಳದ ಮೇಲೆ ಅಡ್ಡ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಚಾಮರಾಜನಗರ ಜಿಲ್ಲೆಯಲ್ಲಿ ಜಾ.ದಳಕ್ಕೆ ಇನ್ನು ಪ್ರಾಮುಖ್ಯತೆ ಸಿಗದಿರುವ ಕಾರಣ ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯಬೇಕಾದ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಇದರೊಂದಿಗೆ ಸಂದೇಶ್ ನಾಗರಜ್ ಬಿಜೆಪಿ-ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರೆ. ಜಿಟಿ ದೇವೇಗೌಡ ತೆರೆಮೆರೆಯಲ್ಲಿ ಕಾಂಗ್ರೆಸ್ ಪರ ತೊಡಗಿಸಿಕೊಳ್ಳುವುದು ಖಚಿತ. ಹಾಗಾಗಿ ಸಿ.ಎನ್.ಮಂಜೇಗೌಡ ಅವರಿಗೆ ಎಚ್ ಡಿ ಕುಮಾರಸ್ವಾಮಿ ನಾಮಬಲದ ರಕ್ಷೆಯೊಂದಿಗೆ ಸಾಂಪ್ರದಾಯಕ ಮತಗಳನ್ನು ಗಳಿಸುವ ಅನಿವಾರ್ಯ ಕಂಡುಬಂದಿದೆ.
ಒಟ್ಟಾರೆ ಚುನಾವಣೆಯು ಮೂರು ಪಕ್ಷಗಳ ನಾಯಕರುಗಳಿಗೆ ಪ್ರತಿಷ್ಠೆ ಯಾಗಿದ್ದು ಮತದಾರರ ಒಲವು ಯಾರ ಮೇಲೆ ಇದೆ ಎಂಬುದು ಚುನಾವಣಾ ಫಲಿತಾಂಶ ನಂತರವಷ್ಟೇ ತಿಳಿಯಲಿದೆ.