ರಂಗೇರಿದ ರೈತ ಒಕ್ಕೂಟದ ಭಾರತ ಬಂದ್ ಪ್ರಚಾರ

??????

ವಾಡಿ:ಸೆ.25: ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿರುವ ಮೂರು ಕೃಷಿ ಮಸೂಧೆಗಳನ್ನು ಹಿಮ್ಮೆಟ್ಟಿಸದಿದ್ದರೆ ಅನ್ನ ಬೆಳೆಯುವ ರೈತರಿಗೆ ಉಳಿಗಾಲವಿಲ್ಲ. ಸರಕಾರದ ಕಾರ್ಪೋರೇಟ್ ಪರವಾದ ನಿಲುವಿನಿಂದ ಕೃಷಿ ಕ್ಷೇತ್ರದ ಮೇಲೆ ಭಾರಿ ಹೊಡೆತ ಬೀಳಲಿದೆ. ಮೂರು ಮಸೂದೆಗಳು ಜಾರಿಗೆ ಬರಬಾರದು ಎಂದು ಆಗ್ರಹಿಸಿ ರೈತರು ದೆಹಲಿ ಗಡಿಯಲ್ಲಿ ಕಳೆದ 11 ತಿಂಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ.

ರೈತ ವಿರೋಧಿ ಕರಾಳ ಮಸೂಧೆಗಳನ್ನು ಧಿಕ್ಕರಿಸಿ ಸೆ.27 ರಂದು ವಿವಿಧ ರೈತ ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ಭಾರತ ಬಂದ್ ಹೋರಾಟದ ಪ್ರಚಾರ ದಿನೇದಿನೆ ರಂಗೇರುತ್ತಿದ್ದು, ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ರೈತರ ಸಭೆಗಳು ನಡೆಯುತ್ತಿವೆ. ವಿದ್ಯಾರ್ಥಿ-ಯುವಜನರು ಭಾರತ ಬಂದ್ ಘೋಷಣೆಯ ಬಿತ್ತಿಪತ್ರಗಳನ್ನು ಗೋಡೆಗಳಿಗೆ ಲಗತ್ತಿಸುವಲ್ಲಿ ನಿರತರಾಗಿದ್ದಾರೆ. ಮಹಿಳೆಯರು, ಕಾರ್ಮಿಕರು, ಯುವಕರು, ವಿದ್ಯಾರ್ಥಿಗಳು ಅನ್ನದಾತರ ಬೆನ್ನಿಗೆ ನಿಂತು ಪ್ರಚಾರಾಂದೋಲನದಲ್ಲಿ ತೊಡಗಿಕೊಂಡಿದ್ದು ಕಂಡುಬರುತ್ತಿದೆ.

ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಜಾಗೃತಿ ಸಭೆಗಳನ್ನು ಸಂಘಟಿಸುವ ಜವಾಬ್ದಾರಿ ಹೊತ್ತಿರುವ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‍ಕೆಎಸ್) ನಾಯಕರು, ಹಲವು ಗ್ರಾಮಗಳ ರೈತರಿಗೆ ಭಾರತ ಬಂದ್ ಚಳುವಳಿಯ ಸಂದೇಶ ರವಾನಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ವಾಡಿ, ಹಳಕರ್ಟಿ, ಇಂಗಳಗಿ, ಕುಂದನೂರ, ಲಾಡ್ಲಾಪುರ, ನಾಲವಾರ, ಸನ್ನತಿ, ಮಾರಡಗಿ, ಕೊಲ್ಲೂರ, ಕಮರವಾಡಿ, ಕರದಾಳ, ಅಳ್ಳೊಳ್ಳಿ, ರಾವೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೀಪ್ ಜಾಥಾ ಹಮ್ಮಿಕೊಂಡಿರುವುದಾಗಿ ಆರ್‍ಕೆಎಸ್ ಸಂಘಟನೆಯ ರೈತ ನಾಯಕರು ತಿಳಿಸಿದ್ದಾರೆ.

ಸರಕಾರವಾಗಲಿ ಅಥವ ಮಾಧ್ಯಗಳಾಗಲಿ ರೈತರ ಬೆನ್ನಿಗೆ ನಿಲ್ಲುತ್ತಿಲ್ಲ. ಹೋರಾಟಕ್ಕೂ ನಮಗೂ ಸಂಬಂದವಿಲ್ಲ ಎಂಬಂತೆ ವರ್ತಿಸುವ ಮೂಲಕ ಎಲ್ಲರೂ ಬಂಡವಾಳಶಾಹಿ ಶೋಷಕರಿಗೆ ನಿಷ್ಠೆಯಾಗಿ ನಿಂತಿದ್ದಾರೆ. ಬಿಜೆಪಿ ಸರಕಾರದ ರೈತ ವಿರೋಧಿ ಧೋರಣೆ ವಿರುದ್ಧ ಸೆ.27 ರಂದು ಕರೆ ನೀಡಲಾದ ಭಾರತ ಬಂದ್ ಹೋರಾಟ ಇತಿಹಾಸದ ಪುಟ ಸೇರಲಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೊಡ್ಡ ಪೆಟ್ಟು ನೀಡಲು ಸಜಾಗಿದ್ದಾರೆ. ಹೋರಾಟದ ಪ್ರಚಾರ ರಾತ್ರಿ ಹಗಲೆನ್ನದೆ ನಿರಂತರವಾಗಿ ಸಾಗಿದೆ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಪ್ರತಿಕ್ರೀಯಿಸಿದ್ದಾರೆ.