
ಸಂಜೆವಾಣಿ ವರದಿ: ಬಾಬುಅಲಿ ಕರಿಗುಡ್ಡ
ದೇವದುರ್ಗ,ಫೆ.೨೭- ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಂತೆ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಮೂರೂ ಪಕ್ಷಗಳು ನಾ ಮುಂದು, ತಾ ಮುಂದು ಎನ್ನುವಂತೆ ಪ್ರಚಾರಕ್ಕೆ ಇಳಿದಿವೆ.
೨೦೦೮ರಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿದ್ದು, ಅಲ್ಲಿಂದ ಮೂರೂ ಪಕ್ಷಗಳಿಗೆ ತಾಲೂಕಿನ ಮತದಾರರು ಅವಕಾಶ ನೀಡಿದ್ದಾರೆ. ಇದರಲ್ಲಿ ಬಿಜೆಪಿ ಸ್ವಲ್ಪ ಮಟ್ಟಿಗೆ ಮೇಲುಗೈ ಸಾಧಿಸಿದೆ. ಈಗ ಮೂರೂ ಪಕ್ಷಗಳಿಂದ ತೀವ್ರ ಸ್ಪರ್ಧೆ ಇದ್ದು ತ್ರಿಕೋನ ಸ್ಪಧೆ ಏರ್ಪಡುವ ಎಲ್ಲ ಸಾಧ್ಯತೆಗಳಿವೆ.
೨೦೦೮ರಲ್ಲಿ ಕೆ.ಶಿವನಗೌಡ ನಾಯಕ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬದಲಾದ ರಾಜಕೀಯ ಚಟುವಟಿಕೆ ಹಿನ್ನೆಲೆಯಲ್ಲಿ ಅಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿ ಒಂದೇ ವರ್ಷದಲ್ಲಿ ಮತ್ತೆ ಚುನಾವಣೆ ಎದುರಿಸಿದ್ದರು. ಅಂದಿನ ಬಿಜೆಪಿ ಸರ್ಕಾರದ ಪ್ರಭಾವ, ಘಟಾನುಘಟಿ ನಾಯಕರು ಹಾಗೂ ಶಾಸಕ ಕೆ.ಶಿವನಗೌಡ ನಾಯಕರ ಪ್ರಭಾವದಿಂದ ಎರಡನೇ ಬಾರಿಗೆ ಬಿಜೆಪಿ ಚಿಹ್ನೆಯಡಿ ಗೆಲುವು ಸಾಧಿಸಿದ್ದರು.
೨೦೧೩ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ತಾತ ದಿ.ಎ.ವೆಂಕಟೇಶ ನಾಯಕ ವಿರುದ್ಧ ಮೊದಲ ಬಾರಿಗೆ ಸೋಲು ಕಂಡಿದ್ದರು. ಅಂದು ವೆಂಕಟೇಶ ನಾಯಕ ಗೆಲುವು ಸಾಧಿಸಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು. ಅದಾದ ಮೂರು ವರ್ಷದ ಬಳಿಕೆ ದಿ.ಎ.ವೆಂಟಕೇಶ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಜರುಗಿದ ಉಪಚುನಾವಣೆಯಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡಿ ಹಾಟ್ರಿಕ್ ಗೆಲುವು ಸಾಧಿಸಿದ್ದರು.
ಬಳಿಕ ೨೦೧೮ರಲ್ಲಿ ಜರುಗಿದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದರು. ಆದರೆ, ಈಗ ಕಾಲಬದಲಾಗಿದ್ದು, ರಾಜಕೀಯ ಸ್ಥಿತಿಗತಿ ಕೂಡ ಬದಲಾಗಿದೆ. ಜೆಡಿಎಸ್ ನಾಯಕರು ಕರೆಮ್ಮ ಜಿ.ನಾಯಕಗೆ ಚುನಾವಣೆಗೆ ಮುನ್ನವೇ ಟಿಕೆಟ್ ಘೋಷಣೆ ಮಾಡಿದ್ದಾರೆ. ಅಲ್ಲದೆ ಎರಡ್ಮೂರು ವರ್ಷಗಳಿಂದ ಕರೆಮ್ಮ ಜಿ.ನಾಯಕ ಜನರ ಜತೆ ನಿರಂತರವಾಗಿ ಸಂಪರ್ಕ ಇದ್ದು, ೨೦೧೮ರಲ್ಲಿ ಜೆಡಿಎಸ್ ಟಿಕೆಟ್ ಕೈತಪ್ಪಿರುವುದು ಅವರಿಗೆ ಅನುಕಂಪದ ಅಲೆಯಿದೆ.
ಕ್ಷೇತ್ರದಲ್ಲಿ ತನ್ನದೆಯಾದ ಕಾರ್ಯಕರ್ತರ ಪಡೆ ಹೊಂದಿರುವ ಕಾಂಗ್ರೆಸ್ ಪಕ್ಷ ತನ್ನದೆಯಾದ ಕಾರ್ಯತಂತ್ರ ಹೆಣೆಯುತ್ತಿದೆ. ಆದರೆ, ಅಭ್ಯರ್ಥಿಯ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಟಿಕೆಟ್‌ಗಾಗಿ ಮಾಜಿ ಸಂಸದ ಬಿ.ವಿ.ನಾಯಕ, ಅವರ ಸೊಸೆ ಶ್ರೀದೇವಿ ರಾಜಶೇಖರ ನಾಯಕ, ಸಂದೀಪ್ ನಾಯಕ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಿ.ವಿ.ನಾಯಕಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ.
ಬಿ.ವಿ.ನಾಯಕ ಕಾಂಗ್ರೆಸ್ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮಾಡಿದರೆ ಶ್ರೀದೇವಿ ನಾಯಕರು ಮಹಿಳೆಯರ ಓಲೈಕೆ ಮುಂದಾಗಿದ್ದಾರೆ. ಜೆಡಿಎಸ್ ನಿಯೋಜಿತ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿ ತಮ್ಮದೆಯಾದ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಅಲ್ಲದೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕರೆಸಿ ಎರಡು ದಿನಗಳ ಕಾಲ ಪಂಚರತ್ನ ಯಾತ್ರೆ ಮಾಡಿದ್ದರು.
ಇವರಿಗೆ ಸೆಡ್ಡು ಹೊಡೆದಿರುವ ಶಾಸಕ ಕೆ.ಶಿವನಗೌಡ ನಾಯಕ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಅಲ್ಲದೆ ಸರ್ಕಾರದ ಮೇಲೆ ಒತ್ತಡ ಹಾಕಿ ಸಾವಿರಾರು ಕೋಟಿ ರೂ. ತಂದಿದ್ದು, ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಪಕ್ಷ ಬಲವರ್ಧನೆ ಮಾಡುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿ ಕಾಂಗ್ರೆಸ್ ಜೆಡಿಎಸ್ ತನ್ನದೆಯಾದ ತಂತ್ರ ಪ್ರತಿತಂತ್ರ ಹೆಣೆಯುತ್ತಿವೆ.