ರಂಗೇರಿದ ಚುನಾವಣಾ ಅಖಾಡ: ಬಿಜೆಪಿ-ಟಿಎಂಸಿ ಪೈಪೋಟಿ

ಕೋಲ್ಕತ್ತಾ,ಏ.೪- ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದರ ಹಿಂದೆ ಒಂದು ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾಗಿಯಾಗುವ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಕಳೆದ ಬಾರಿ ಗೆದ್ದಿದ್ದ ಸ್ಥಾನಕ್ಕಿಂತ ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲಲು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ರಾಜ್ಯದೆಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಬಿಜೆಪಿ ಗರಿಷ್ಠ ಚುನಾವಣಾ ಲಾಭ ಗಳಿಸಿದ ಪ್ರದೇಶವಾದ ಉತ್ತರ ಬಂಗಾಳದ ಕೂಚ್ ಬೆಹಾರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬ್ಯಾಕ್ ಟು ಬ್ಯಾಕ್ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದು ಚುನಾವಣಾ ಕಣ ರಂಗೇರತೊಡಗಿದೆ.
ಉತ್ತರ ಬಂಗಾಳದ ಕೂಚ್ ಬೆಹಾರ್, ಅಲಿಪುರ್ದೌರ್ ಮತ್ತು ಜಲ್ಪೈಗುರಿ ಸ್ಥಾನಗಳನ್ನು ಗೆಲ್ಲಲು ಬಿಜೆಪಿ, ಟಿಎಂಸಿ ಇನ್ನಿಲ್ಲದ ಕಸರತ್ತು ನಡೆಸಿವೆ. ಇದರ ಜೊತೆಗೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳೂ ಪೈಪೈಟಿ ನಡೆಸಿವೆ. ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತ ಏಪ್ರಿಲ್ ೧೯ ರಂದು ನಡೆಯಲಿದ್ದು ಆ ವೇಳೆ ಉತ್ತರ ಬಂಗಾಳದ ಚುನಾವಣೆಗೆ ಮತದಾನ ನಡೆಯಲಿದೆ.
೨೦೧೯ ರಲ್ಲಿ ಆಡಳಿತಾರೂಢ ಟಿಎಂಸಿಯಿಂದ , ಬಿಜೆಪಿ ಎಲ್ಲಾ ಮೂರು ಸ್ಥಾನಗಳನ್ನು ವಶಪಡಿಸಿಕೊಂಡಿದೆ. ಇಬ್ಬರು ವಿಜೇತರಾದ ಕೂಚ್ ಬೆಹಾರ್‌ನಿಂದ ನಿಸಿತ್ ಪ್ರಮಾಣಿಕ್ ಮತ್ತು ಅಲಿಪುರ್‍ದವಾರ್‌ನಿಂದ ಜಾನ್ ಬಾರ್ಲಾ ಅವರು ಕೇಂದ್ರದ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೂಚ್ ಬೆಹಾರ್‌ನಲ್ಲಿ ಒಂದು ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಕೂಡ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
೨೦೧೯ ರಲ್ಲಿ, ಬಿಜೆಪಿ ರಾಜ್ಯದ ೪೨ ಲೋಕಸಭಾ ಸ್ಥಾನಗಳಲ್ಲಿ ೧೮ ಸ್ಥಾನಗಳನ್ನು ಗೆದ್ದು ದಾಖಲೆಯನ್ನು ಸೃಷ್ಟಿಸಿತು. ಉತ್ತರ ಬಂಗಾಳದಲ್ಲಿ ಎಂಟು ಸ್ಥಾನಗಳಲ್ಲಿ ಏಳನ್ನು ಪಡೆದುಕೊಂಡಿತು. ಪೂರ್ವ ರಾಜ್ಯದ ಪ್ರಮುಖ ವಿರೋಧ ಪಕ್ಷ ಈ ವರ್ಷ ಕನಿಷ್ಠ ೨೫ ಸ್ಥಾನಗಳನ್ನು ಗೆಲ್ಲಲು ಯೋಜಿಸಿದೆ.