ರಂಗಾವಲೋಕನ ಶಿಬಿರ 5,6 ರಂದು

ಕಲಬುರಗಿ ಡಿ 21: ಉತ್ತಮ ರಂಗ ವಿಮರ್ಶೆ ಮಾಡಲು ಪತ್ರಕರ್ತರನ್ನು,ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಉದ್ದೇಶದಿಂದ ಎರಡು ದಿನಗಳ ರಂಗಾವಲೋಕನ ಶಿಬಿರವನ್ನು ಜನವರಿ 5 ಮತ್ತು 6 ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಆರ್.ಭೀಮಸೇನ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ರಂಗಾಯಣ ಮತ್ತು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ಡಾ. ಬಿ.ವಿ ರಾಜಾರಾಮ್,ರಾಜಪ್ಪ ದಳವಾಯಿ, ನಾರಾಯಣ ರಾಯಚೂರು,ದಿನೇಶ ಅಮೀನಗಡ ಅವರು ಮಾಹಿತಿ ನೀಡುವರು ಎಂದರು.
ಜನವರಿ ಮೊದಲ ವಾರದಲ್ಲಿ ತುಮಕೂರಿನಲ್ಲಿ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಬಾಗಿಲುಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಮಹಿಳಾ ತಂಡಗಳ ನಾಟಕೋತ್ಸವ ನಡೆಯಲಿದೆ.ಮಂಗಳಮುಖಿಯರ ಆತ್ಮಸ್ಥೈರ್ಯ ಸಬಲೀಕರಣಕ್ಕಾಗಿ ರಂಗತರಬೇತಿ ಶಿಬಿರ ಆಯೋಜನಗೊಂಡಿದೆ.ನಾಡಿನ ಎಲ್ಲ ಜಿಲ್ಲೆಗಳಲ್ಲಿ ಮಾರ್ಚ 27 ರಂದು ವಿಶ್ವ ರಂಗಭೂಮಿ ದಿನಾಚರಣೆ ನಡೆಯಲಿದೆ.
ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ವೃತ್ತಿ,ಹವ್ಯಾಸಿ, ಗ್ರಾಮೀಣ,ಬೀದಿ ರಂಗಭೂಮಿಯ 2700 ಕ್ಕೂ ಹೆಚ್ಚು ಕಲಾವಿದರಿಗೆ ಕೋವಿಡ್ 19 ಅಡಿಯಲ್ಲಿ ಧನ ಸಹಾಯ ನೀಡಲಾಗಿದೆ .ನಾಟಕ ಅಕಾಡೆಮಿಯ ಕನ್ನಡದ ಅತ್ಯುತ್ತಮ ನಾಟಕಗಳನ್ನು ಸಂಗ್ರಹಿಸಿದ್ದು ನಾಟಕಾಸಕ್ತರು ಅವುಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಭುದೇವ ಕಪಗಲ್, ಪ್ರಭಾಕರ ಜೋಶಿ,ಪ್ರವೀಣ ನಾಯಕ(ರಾಥೋಡ) ಸೇರಿದಂತೆ ಇತರರಿದ್ದರು.