
ಮೈಸೂರು: ಮೇ.15:- ಇಲ್ಲಿನ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ. ಕಾರ್ಯಪ್ಪ ಭಾನುವಾರ ರಾಜೀನಾಮೆ ನೀಡಿದ್ದಾರೆ.
ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ್ದ ಬಿಜೆಪಿ ನೇತೃತ್ವದ ಸರ್ಕಾರ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಜನಾದೇಶವನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ಮೈಸೂರು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನು 2019ರ ಡಿ.31ರಂದು ಅಧಿಕಾರ ವಹಿಸಿಕೊಂಡಾಗ ರಂಗಾಯಣದ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಈಗ 2.09 ಕೋಟಿ ನಿರಖು ಠೇವಣಿ ಇದೆ. ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ 1.57 ಕೋಟಿ ಉಳಿತಾಯದ ಹಣವಿದೆ. ಸಂಸ್ಥೆಯ ಪ್ರದರ್ಶನ, ದಾನಿಗಳ ನೆರವು, ಅನುದಾನ ಇತ್ಯಾದಿಗಳನ್ನು ಮಿತವ್ಯಯ ಮಾಡಿ ಉಳಿಕೆ ಮಾಡಲಾಗಿದೆ. ಸರ್ಕಾರದ ಇಡುಗಂಟು ಮೊತ್ತ 4 ಕೋಟಿ ಇದ್ದು, ಬಡ್ಡಿ ಮೊತ್ತ 50 ಲಕ್ಷ ಸಂಸ್ಥೆಗೆ ಸಿಗಲಿದೆ. ಒಟ್ಟು 4.16 ಕೋಟಿ ಮೊತ್ತ ಸಂಸ್ಥೆಯ ಖಾತೆಯಲ್ಲಿದೆ. ರಾಜ್ಯದ ಬೇರೆ ರಂಗಾಯಣ ಸಂಸ್ಥೆಗಳ ಖಾತೆಯಲ್ಲಿ 15 ಲಕ್ಷ ಕೂಡ ಉಳಿತಾಯ ಇಲ್ಲ. 3 ವರ್ಷ ಹಗಲಿರುಳು ದುಡಿದು ಮೈಸೂರು ರಂಗಾಯಣದ ಆರ್ಥಿಕ ಸ್ಥಿತಿ ಭದ್ರಪಡಿಸಿದ್ದೇನೆ ಎಂದು ವಿವರಿಸಿದ್ದಾರೆ.