ರಂಗಾಯಣದಲ್ಲಿ ಕಲಾವಿದರ ಕಲರವ

ಮೈಸೂರು, ನ.11: `ರಂಗಾಯಣದೊಂದಿಗೇ ಹವ್ಯಾಸಿ ರಂಗ ಕಲಾವಿದರು ಬೆಳೆದೆವು. ಮುಖ್ಯವಾಗಿ ರಂಗಾಯಣದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳನ್ನು ನೋಡುವ ಆಸ್ಥೆ ಬೆಳೆಯಿತು’ ಎಂದು ಹಿರಿಯ ರಂಗ ಕಲಾವಿದೆ ರತ್ನಾ ವಿಶ್ವನಾಥ ಮಿರ್ಲೆ ಅಭಿಪ್ರಾಯಪಟ್ಟರು.
ನಗರದ ರಂಗಾಯಣದಲ್ಲಿ ಮಂಗಳವಾರ ಮಹಿಳೆಯರಿಗಾಗಿಯೇ ಏರ್ಪಡಿಸಿರುವ ಪದ್ಮಶ್ರೀ ನಾಗರತ್ನಮ್ಮ ರಂಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಾಯಣ ಆರಂಭಗೊಳ್ಳುವ ಮೊದಲು ಬಿ.ವಿ. ಕಾರಂತ ಅವರಿಗೆ ಸಮತೆಂತೋ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ಜೊತೆಗೆ ಒಡನಾಟವಿತ್ತು. ನಂತರ ರಂಗಾಯಣದ ಕಟ್ಟಿ ಬೆಳೆಸಿದರು. ಈಗ ರಂಗಾಯಣದಲ್ಲಿ ನಾಟಕ ಪ್ರದರ್ಶನವಿದ್ದರೆ ಟಿಕೆಟ್ ಸಿಗುವುದಿಲ್ಲ. ಇದು ರಂಗಾಯಣದ ಹೆಮ್ಮೆ ಎಂದು ತಿಳಿಸಿದರು.
ರಂಗ ತರಬೇತಿ ಪಡೆಯುವವರ ಜೊತೆಗೆ ಅವರ ಕುಟುಂಬದವರು, ಗೆಳೆಯರು ನಾಟಕ ನೋಡಲು ಬರುತ್ತಾರೆ. ಹೀಗೆ ರಂಗಾಭಿರುಚಿ ಬೆಳೆಯುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ರಂಗಾಯಣವೆಂದರೆ ಕಲಾವಿದರ ಕಲರವ. ಇಲ್ಲಿ ನೂರಾರು ಕಲಾವಿದರು ತೊಡಗಿಸಿಕೊಂಡಿದ್ದಾರೆ. ಹಿರಿಯ ಕಲಾವಿದರು ಪರ್ವ ನಾಟಕದ ತಾಲೀಮಿನಲ್ಲಿ ನಿರತರಾಗಿದ್ದಾರೆ. ಇದು 6 ಗಂಟೆಗಳ ಮಹತ್ವಪೂರ್ಣ ನಾಟಕವಾಗಲಿದೆ ಎಂದರು.
ಸುಬ್ಬಯ್ಯ ನಾಯ್ಡು ರಂಗತರಬೇತಿ ಶಿಬಿರದಲ್ಲಿ 26, ಮಹಿಳೆಯರಿಗಾಗಿ ಏರ್ಪಡಿಸಿರುವ ಶಿಬಿರದಲ್ಲಿ 20 ಶಿಬಿರಾರ್ಥಿಗಳು ಇದ್ದಾರೆ. ರಂಗಭೂಮಿಗೆ ಬರುವ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಗೃಹಿಣಿಯರಿಗೂ ಅಭಿನಯಿಸುವ ಆಸೆಯಿದ್ದರೂ ಅವಕಾಶಗಳು ಸಿಗುವುದು ಅಪರೂಪ. ಅಂಥÀವರಿಗೆ ಈ ಶಿಬಿರ ನೆರವಾಗಲಿದೆ ಎಂದು ಕಾರ್ಯಪ್ಪ ಹೇಳಿದರು. ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.
ನಂತರ ಸುಬ್ಬಯ್ಯ ನಾಯ್ಡು ಅಭಿನಯ ರಂಗ ತರಬೇತಿ ಶಿಬಿರಾರ್ಥಿಗಳಿಂದ ಕೋಲಾಟ ನಡೆಯಿತು. ಧನಂಜಯ್ ಆರ್.ಸಿ ಅವರು ರಂಗಗೀತೆ ಹಾಡಿದರು. ರಂಗಾಯಣದ ಕಲಾವಿದೆ ಗೀತಾ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.