ರಂಗಾಪುರ, ಹೊಸಹಳ್ಳಿ ಕೆರೆಗೆ ನೀರು ಪೂರೈಕೆ

ತಿಪಟೂರು, ಜು. ೨೮- ಕಳೆದ ವರ್ಷದ ಜುಲೈನಲ್ಲಿ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದ ಕಾಮಗಾರಿಯೂ ಪೂರ್ಣಗೊಂಡಿದ್ದು, ಕೆರೆಗೆ ನೀರು ಹರಿದಿದೆ.
ತಾಲ್ಲೂಕಿನ ರಂಗಾಪುರ, ಚಿಕ್ಕಕೊಟ್ಟಿಗೆಹಳ್ಳಿ, ಹೊಸಹಳ್ಳಿ ಕೆರೆಗಳಿಗೆ ನಾಗಮಂಗಲ ನಾಲೆ ಮೂಲಕ ೫ ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ನಾರಸೀಕಟ್ಟೆ ಬಳಿಯ ಶಿಂಷ ನದಿಯಿಂದ ಯೋಜನೆಗೆ ೪ ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ. ರಂಗಾಪುರ ಹೊಸಕೆರೆ, ಹೊಸಹಳ್ಳಿ ಕೆರೆಗಳಿಗೆ ನೀರನ್ನು ಬಿಟ್ಟಿದ್ದು ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.
ಕಳೆದ ಹಲವಾರು ವರ್ಷಗಳಿಂದ ಈ ಯೋಜನೆಗಾಗಿ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಯೋಜನೆಗೆ ಅನುಮೋದನೆ ಕೊಡಿಸಿದ್ದು, ವರ್ಷದೊಳಗೆ ನೀರು ಪೂರೈಸುವ ಭರವಸೆ ನೀಡಿದ್ದರು. ಇದೀಗ ಆ ಭರವಸೆ ಈಡೇರಿದಂತಾಗಿದೆ.
ಸಣ್ಣ ನೀರಾವರಿ ಇಲಾಖೆಯ ತ್ವರಿತ ಕಾಮಗಾರಿಯಿಂದ ವರ್ಷದಲ್ಲಿಯೇ ಕೆರೆಗೆ ನೀರು ಬಂದಿದೆ. ಸ್ಥಳೀಯರ ಬಹುವರ್ಷಗಳ ಕನಸು ನನಸಾಗಿದೆ ಎಂದು ರಂಗಾಪುರ ಗ್ರಾಮಸ್ಥ ರಾಜಶೇಖರಯ್ಯ ತಿಳಿಸಿದ್ದಾರೆ.