ತಿಪಟೂರು, ಅ. ೨೮- ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿ ಯವರ ನೇತೃತ್ವದಲ್ಲಿ ಮಠದ ಗುರುಪರಂಪರೆಯಂತೆ ಕೆರೆಗೋಡಿಯ ಮಹಾನವಮಿ ಮಂಟಪದ ತೋಪಿನಲ್ಲಿ ಅಂಬುಹಾಯಿಸುವ (ಶಮಿಪೂಜೆ) ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಬನ್ನಿ ಮಂಟಪಕ್ಕೆ ಶಂಕರೇಶ್ವರ ಸ್ವಾಮಿಯ ಮೂರ್ತಿಯನ್ನು ಮೂಲ ಸ್ಥಾನದಿಂದ ಆಕರ್ಷಕವಾದ ತಿರುಗುಣಿ ಅಶ್ವವಾಹನದಲ್ಲಿ ಉತ್ಸವಾದಿಗಳ ಮೂಲಕ ಸ್ವಾಮೀಜಿಯವರ ನೇತೃತ್ವದಲ್ಲಿ ಕೆರೆಗೋಡಿ ದೇವಾಲಯ ಮತ್ತು ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ಕರೆ ತರಲಾಗುವುದು. ನಂತರ ಬನ್ನಿಮಂಟಪದಲ್ಲಿ ನಡೆಯುವ ಅಂಬುಹಾಯಿಸುವ ಕಾರ್ಯಕ್ರಮದಲ್ಲಿ ಭಕ್ತರು ತಮ್ಮಗಳ ಹರಕೆ ತೀರಿಸಲು ವಿವಿಧ ಬಗೆಯ ವೇಷಗಳನ್ನು ಧರಿಸಿದ್ದರು. ಯುವಕರು ಅತೀ ಹೆಚ್ಚು ಬಗ್ಗಡಸೇವೆಯಲ್ಲಿ ತೊಡಗಿದ್ದರು.
ಜತೆಗೆ ಪುರುಷರು ಹೆಣ್ಣು ಮಕ್ಕಳ ವಿವಿಧ ಆಕರ್ಷಕ ಬಟ್ಟೆಗಳ ಧರಿಸಿ ಬರುತ್ತಾರೆ. ಬಗ್ಗಡ ತೊಯ್ದ ಬಟ್ಟೆಗಳು, ಗೋಣಿಚೀಲಗಳ ಉಡುಗೆ ತೊಡುಗೆಗಳನ್ನು ತೊಟ್ಟು ವಿವಿಧ ಭಂಗಿಗಳಲ್ಲಿ ಭಾಗಿಯಾಗುತ್ತಾರೆ. ಈ ಸೇವೆ ಪುರುಷರು ತಮ್ಮ ವೈಯಕ್ತಿಕ ಏಳ್ಗೆಗೆ, ರೋಗರುಜಿನಗಳ ಮುಕ್ತಿಗಾಗಿ ಮಾಡಿಕೊಂಡ ಹರಕೆಯಾಗಿರುತ್ತದೆ. ಜತೆಗೆ ಮೋಡಿ ಕಾರ್ಯಕ್ರಮ ಸಹ ಆಕರ್ಷಕವಾಗಿತ್ತು. ತಾಲ್ಲೂಕು, ಅಕ್ಕ ಪಕ್ಕದ ತಾಲ್ಲೂಕುಗಳಿಂದ ಅಂಬು ಕಾರ್ಯರ್ಕಮಕ್ಕೆ ಭಕ್ತರು ಸೇರಿರುತ್ತಾರೆ.
ಮಂಟಪದಲ್ಲಿ ಶಂಕರೇಶ್ವರಸ್ವಾಮಿಗೆ ಮಹಾಮಂಗಳಾರತಿ ನಡೆಸಿ ಬನ್ನಿಮಂಟಪದ ಅಡಿಯಲ್ಲಿ ನೆಟ್ಟು ಪೂಜಿಸಿದ್ದ ಗೊನೆಹೊತ್ತ ಬಾಳೆ ಗಿಡವನ್ನು ಕಡಿದುರುಳಿಸುವ ಮೂಲಕ ಅಂಬುಹಾಯಿಸುವ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು. ನಂತರ ಎಲ್ಲರಿಗೂ ಬನ್ನಿ ಪತ್ರೆ ವಿತರಿಸಲಾಯಿತು.