ರಂಗಮಂದಿರ ನವೀಕರಣ ಕಾಮಗಾರಿ ಕಳಪೆಯಾದರೆ ಡಿಸಿ ನೇರ ಹೊಣೆ

ರಾಯಚೂರು,ಜ.೨- ಬಿಜೆಪಿ ಸರಕಾರದಲ್ಲಿ ೪೦ % ಭ್ರಷ್ಟಾಚಾರ ನಡೆಯುತ್ತಿರುವುದನ್ನು ಕೇಳಿದ್ದೆ.ಪತ್ರಿಕೆಯಲ್ಲಿ ಓದಿದ್ದೆ. ಆದರೆ ಈಗ ನನಗೆ ಸ್ವತಃ ಅನುಭವವಾಗಿರುವುದು ಅದು ಸತ್ಯ ಎನ್ನುವುದು ಅರಿವಿಗೆ ಬಂದಿದೆ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಮ್ಮ
ಮುನ್ನೂರು ಕಾಪು ಶಿಕ್ಷಣ ಸಂಸ್ಥೆಗೆಯ
ಕಟ್ಟಡವೊಂದಕ್ಕೆ ೧೦ ಲಕ್ಷ ರೂ.ಅನುದಾನ ಮಂಜೂರಾಗಿತ್ತು.ಅದರಲ್ಲಿ ಕೇವಲ ೫ ಲಕ್ಷ ರೂ.ಗಳನ್ನು ಮಾತ್ರವೇ ನೀಡಿದರು.ನಾನು ಉಳಿದ ಹಣ ಎಲ್ಲಿ ಎಂದು ಕೇಳಿದೆ.ಇನ್ನೂ ಬಾಕಿ ಬಿಲ್ ಕೊಡುವಾಗ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬ ತಿಳಿಸಿದ. ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿದಾಗ ಬಾಕಿ ಬಿಲ್ ಪಾವತಿಯಾಗಿರುವ ಮಾಹಿತಿ ಲಭ್ಯವಾಯಿತು.ಮಾಜಿ ಶಾಸಕರಿಗೆ ಈ ರೀತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರವು ೨.೨ ಕೋಟಿ ರೂ.ವೆಚ್ಚದಲ್ಲಿ ನವೀಕರಣ ನಡೆಯುತ್ತಿದೆ. ೧೯೯೭ರಲ್ಲಿ ಉದ್ಘಾಟನೆಯಾದ ಈ ರಂಗಮಂದಿರವು ೨೦ ವರ್ಷಗಳ ಕಾಲ ಏನೂ ಆಗಿರಲಿಲ್ಲ. ಆದರೆ ೨೦ ವರ್ಷಗಳ ನಂತರ ಅಂದರೆ ೨೦೧೬-೧೭ ರಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ ಅವರ ಸಹೋದರ ಗುತ್ತಿಗೆ ಪಡೆದು ೨ ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದರು. ಆದರೆ ತಿಂಗಳೊಳಗೆ ಅಲ್ಲಿನ ಆಸನಗಳು ಕಿತ್ತುಕೊಂಡು ಬಂದಿರುವುದಾಗಿ ವರದಿ ಕೇಳಿ ಬಂದಿತ್ತು.ಅಂತಹ ಕಳಪೆ ಕಾಮಗಾರಿ ನಿರ್ವಹಿಸಿದ ಕ್ಯಾಸುಟೆಕ್ ಸಂಸ್ಥೆಗೆ ಮತ್ತೆ ಕಾಮಗಾರಿ ನಿರ್ವಹಣೆಗೆ ವಹಿಸಿರುವುದು ಅಲ್ಲಿ ಭ್ರಷ್ಟಾಚಾರದ ಸಂದೇಹ ಮೂಡುತ್ತಿದೆ. ಅದು ಅಲ್ಲದೆ ಈ ಕ್ಯಾಸುಟೆಕ್ ಸಂಸ್ಥೆ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಇದರ ನೇರ ಹೊಣೆಯನ್ನು ಹೊರಬೇಕಾಗುತ್ತದೆ. ಆದ್ದರಿಂದ ಈ ಕಾಮಗಾರಿಯನ್ನು ಪಿ.ಡಬ್ಲ್ಯೂ
ಡಿಯವರಿಗೆ ಒಪ್ಪಿಸಬೇಕು.ಇಲ್ಲವೇ ೨.೫ ಕೋಟಿ ರೂ.ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು.ಕಾಮಗಾರಿಯನ್ನು ಪೂರ್ಣಗೊಂಡ ನಂತರ ಕಾಮಗಾರಿಯನ್ನು ವೀಕ್ಷಿಸಿ ಕಳಪೆಯಾಗಿದ್ದರೆ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದೆಂದು ಎಚ್ಚರಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ರಂಗಭೂಮಿ ಕಲಾವಿದ ಆಲ್ತಾಫ್ ಸೇರಿದಂತೆ ಇತರರು ಇದ್ದರು.