ರಂಗಭೂಮಿ ಸಮಾಜದ ಪ್ರತಿಬಿಂಬ

ಕಲಬುರಗಿ:ಮಾ.27: ನಾಟಕ ಅಥವಾ ರಂಗಭೂಮಿಯು ಸಮಾಜದಲ್ಲಿರುವ ಅಂಕು-ಡೊಂಕುಗಳು, ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುಮ ಮೂಲಕ ಪರಿಹಾರವನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತದೆ. ಆಧುನೀಕರಣದ ಇಂದಿನ ಯುಗದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಾಟಕ, ರಂಗಭೂಮಿ ಸಂಸ್ಕøತಿ, ಮೌಲ್ಯಗಳ ರಕ್ಷಕನಾಗಿ, ಸಮಾಜದ ಪ್ರತಿಬಿಂಬವಾಗಿ ಕಾರ್ಯನಿರ್ವಹಿಸತ್ತದೆಯೆಂದು ಹಿರಿಯ ಹವ್ಯಾಸಿ ರಂಗಭೂಮಿ ಕಲಾವಿದ ರಮೇಶ ಕೋರಿಶೆಟ್ಟಿ ಅಭಿಮತಪಟ್ಟರು.

    ನಗರದ ರಾಮಮಂದಿರ-ಹೈಕೋರ್ಟ್ ರಸ್ತೆಯಲ್ಲಿರುವ ಕೊಹಿನೂರ ಪದವಿ ಕಾಲೇಜಿನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ವು ಶನಿವಾರ ಏರ್ಪಡಿಸಿದ್ದ ‘ವಿಶ್ವ ರಂಗಭೂಮಿ ದಿನಾಚರಣೆ’ ಪ್ರಯುಕ್ತ ರಂಗಭೂಮಿ ಕಲಾವಿದರಿಗೆ ಹಮ್ಮಿಕೊಂಡಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

   ಮತ್ತೋರ್ವ ರಂಗಭೂಮಿ ಕಲಾವಿದ ಸಂಗಣ್ಣ ಅಲ್ದಿ ಮಾತನಾಡಿ, ರಂಗಭೂಮಿ ನೆಡದಾಡುವ ವಿಸ್ವವಿದ್ಯಾಲಯವಾಗಿದೆ. ಇಂದಿನ ಆಧುನಿಕತೆಯ ಡಿಜಿಲೀಕರಣದ ಯುಗದಲ್ಲಿ ನಾಟಕ ನೋಡುವ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಅನಿವಾರ್ಯವಾಗಿ ಮೂಲ ಕಲಾವಿದರು ತಮ್ಮ ಜೀವನ ಸಾಗಿಸುವುದು ಕಷ್ಟವಾಗಿ, ಮತ್ತೊಂದು ವೃತ್ತಿಗೆ ತೆರಳಬೇಕಾದ ಅನಿವಾರ್ಯತೆ ಬಂದಿದೆ. ಕಲಾವಿದರಿಗೆ ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಿದರೆ ಮಾತ್ರ ಕಲೆಗಳು,ಕಲಾವಿದರು ಉಳಿಯಲು ಸಾಧ್ಯವಿದೆಯೆಂದು ಮಾರ್ಮಿಕವಾಗಿ ನುಡಿದರು.

  ಜೀವನವೇ ಒಂದು ರಂಗಭೂಮಿಯಾಗಿದೆ. ಇಲ್ಲಿ ಪ್ರತಿಯೊಬ್ಬರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸದರೆ ಜೀವನವೆಂಬ ನಾಟಕ ಉತ್ತಮವಾಗಿ ಪ್ರದರ್ಶನವಾಗಲು ಸಾಧ್ಯವಿದೆ. ಜ್ಞಾನ,ಅನುಭವ, ಮೌಲ್ಯಗಳನ್ನು ಹೊಂದಿರುವ ನಾಟಕಗಳನ್ನು ವೀಕ್ಷಿಸಬೇಕು. ಗಾಂಧೀಜಿಯವರು ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಮೇಲೆ ಇಡೀ ತಮ್ಮ ಜೀವನದಲ್ಲಿ ಎಂದಿಗೂ ಕೂಡಾ ಸುಳ್ಳನ್ನು ಹೇಳಲಿಲ್ಲವೆಂದರೆ ನಾಟಕಗಳು, ರಂಗಭೂಮಿ ಅತ್ಯಂತ ಪ್ರಭಾವಶಾಲಿ ಮಾಧ್ಯಮವೆಂಬ ಮಾತನ್ನು ಪುಷ್ಟಿಕರಿಸುತ್ತದೆಯೆಂದು ಹೇಳಿದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಡಾ.ಹಣಮಂತರಾಯ ಬಿ.ಕಂಟೆಗೋಳ್, ಜಗದೀಶ ಹಿರೇಮಠ, ಮಹೇಶ ಕುಂಬಾರ, ಹರೀಶ ಜಾಲಾದಿ, ವಿಶಾಲ ಹುಣಸಿನಕೇರಿ ಸೇರಿದಂತೆ ಮತ್ತಿತರರಿದ್ದರು.