ರಂಗಭೂಮಿ ಸಮಾಜದ ಪ್ರತಿಬಿಂಬ–ಹಲಗತ್ತಿ


ಧಾರವಾಡ ಮಾ.28-ರಂಗಭೂಮಿ ಎನ್ನೋದು ಸಮಾಜದ ಪ್ರತಿಬಿಂಬ. ಅಲ್ಲಿ ಏನು ನಡೆಯುತ್ತದೆ ಅದನ್ನು ಎತ್ತಿ ತೋರಿಸುವ ಸಾಧನವಾಗಿದೆ. ರಂಗಭೂಮಿಗೆ ಯಾವುದರ ಹಂಗೂ ಇಲ್ಲ. ಅದು ನಿಂತ ನೀರಲ್ಲ, ಸದಾ ಚಲನಶೀಲವಾಗಿರುವ ಭೂಮಿ. ಎಂದೂ ವ್ಯವಸ್ಥೆಯ ಅಡಿಯಾಳಾಗಿ ನಿಲ್ಲುವುದಿಲ್ಲ ಎಂದು ಸಾಹಿತಿ ಶಂಕರ ಹಲಗತ್ತಿ ಮಾತನಾಡಿದರು.
ಅವರು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಗುಬ್ಬಚ್ಚಿ ಗೂಡು ಶಾಲೆಯ ಮತ್ತು ನಟಸಾಮ್ರಾಟ ನಟನಾ ಶಾಲೆಯ ಮಕ್ಕಳಿಂದ ಮಾಳಾಪೂರದಲ್ಲಿ ಹಮ್ಮಿಕೊಂಡ `ಸ್ವಚ್ಛ ಭಾರತ’ ಬೀದಿನಾಟಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ ಜಗತ್ತಿನಾದ್ಯಂತ ಈ ದಿನ ರಂಗಭೂಮಿಯ ಕೊಡುಗೆಯನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಎಷ್ಟೋ ಕಲಾವಿದರು ಪ್ರಭುತ್ವದ ವೈಖರಿಯನ್ನು ರಂಗದ ಮೂಲಕ ಹೇಳಲು ಹೊರಟಾಗ ಪ್ರಾಣವನ್ನೇ ನೂರಾರು ಕಲಾವಿದರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೂ ಇಂದಿಗೂ ರಂಗಭೂಮಿ ತನ್ನ ಶಕ್ತಿಯನ್ನು ಕಿಂಚಿತ್ತೂ ಕಳೆದುಕೊಂಡಿಲ್ಲ. ರಂಗಭೂಮಿ ಪ್ರಕಾರಗಳಲ್ಲಿ ಇಂದು ಬೀದಿನಾಟಕ ಹೆಚ್ಚು ಪ್ರಭಲ ಮಾಧ್ಯಮವಾಗಿದೆ. ಯಾರಿಗಾಗಿ ಏನನ್ನು ಹೇಳಬೇಕೋ ನೇರವಾಗಿ ಅವರಿಗೆ ಮನದಟ್ಟು ಆಗುವ ಹಾಗೆ ಹೇಳುವುದಲ್ಲದೇ ಅವರೊಂದಿಗೆ ಸಂವಾದ ಮಾಡುವ ಮೂಲಕ ಬೀದಿನಾಕ ಕಲೆ ಜನಮನ್ನಣೆಯ ಕಲೆಯಾಗಿದೆ. ಇಂದು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಭಲ ಅಸ್ತ್ರವಾಗಿ ಆಳುವ ವರ್ಗ ಈ ಬೀದಿನಾಟಕದ ಕಲೆಯನ್ನು ಬಳಸಿಕೊಳ್ಳುವ ಮೂಲಕ ಅದರ ಮೂಲ ಆಶಯಕ್ಕೆ ಇಂದು ಚ್ಯುತಿ ಬಂದೊದಗಿದೆ. ಬೀದಿನಾಟಕ ಎಂದರೆ ಅದು ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಅಸ್ತ್ರ. ಅದು ಇದ್ದಾಗ ಮಾತ್ರ ಆಳುವ ವರ್ಗವನ್ನು ಎಚ್ಚರಿಸಲು ಸಾಧ್ಯವಾಗುವುದು ಎಂದರು.
ನೆಹರು ಯುವಕ ಕೇಂದ್ರದ ಸಮನ್ವಯ ಅಧಿಕಾರಿ ಗೌತಮರೆಡ್ಡಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಕೇಂದ್ರ ಸರಕಾರ ಸ್ವಚ್ಛತೆ ಬಗ್ಗೆ ಹಾಕಿಕೊಂಡ ಯೋಜನೆಗಳನ್ನು ಹೇಳಿ ನೆಹರು ಯುವಕೇಂದ್ರ ಯುವಕರ ಮೂಲಕ ಸಮಾಜದ ಅಭಿವೃದ್ಧಿಗೆ ಕಾರ್ಯ ಮಾಡುತ್ತಿದೆ ಎಂದರು. ಕಮಲಾಪುರದ ಪ್ರಗತಿಪರ ರೈತ ಮಲ್ಲೇಶಪ್ಪ ಇಸರಣ್ಣವರ ಅತಿಥಿಗಳಾಗಿ ಮಾತನಾಡಿ, ಮಕ್ಕಳು ಬೀದಿಯಲ್ಲಿ ನಿಂತು ನಾಟಕಮಾಡುತ್ತಾ ಜನತೆಗೆ ಸ್ವಚ್ಛತೆ ಬಗ್ಗೆ ಹೇಳುತ್ತಿರುವುದನ್ನು ಜನ ಅರ್ಥಮಾಡಿಕೊಳ್ಳಬೇಕು. ಮಕ್ಕಳಿಂದ ಹೇಳಿಸಿಕೊಳ್ಳುವಂತ ಪರಿಸ್ಥಿತಿ ಬರಬಾರದು ಎಂದರು.
ಯುವ ರಾಷ್ಟ್ರೀಯ ಕಾರ್ಯಕರ್ತ ವಿರೇಶ ಸವದತ್ತಿ ಮತ್ತು ಶಿವಾಜಿ ಗಡ್ಡೆಪ್ಪನವರ ಭಾಗವಹಿಸಿದ್ದರು.ರಂಗ ಸಾಮ್ರಾಟ ನಟನಾ ಶಾಲೆಯ ಮುಖ್ಯಸ್ಥ ಸಿಕಂದರ ದಂಡೀನ ಬೀದಿ ನಾಟಕವನ್ನು ಬರೆದು, ನಿರ್ದೇಶಿಸಿ ಮಕ್ಕಳಿಂದ ಆಡಿಸಿದರು.ಜಾಥಾದ ಮೂಲಕ ಮಕ್ಕಳು ಮಾಳಾಪೂರ ವಿವಿಧ ಓಣಿಗಳಲ್ಲಿ ಸುತ್ತಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಬೀದಿ ನಾಟಕದಲ್ಲಿ ಭಾಗವಹಿಸಿದ ಮಕ್ಕಳು ಸುಮಿತ್ ಸಂಕೋಜಿ, ಚೇನ ಭೈರಿಕೊಪ್ಪ, ರೋಹಿತ್ ಜಾದವ, ಪ್ರಜ್ವಲ್ ಹೂಗಾರ, ಸುಮಿತ್ ಭಜಂತ್ರಿ, ತ್ರಿಷಾ ಮುರುಗೋಡ್, ಆದರ್ಶ ಬೈರಿಕೊಪ್ಪ, ರಾಹುಲ ದಾರೆಕರ, ವಿಶಾಲ್ ಕೊಟೂರ್, ತುಳಿಸಿ ಮೊಕಾಶಿ, ಲೋಹಿತ್ ಮೊಕಾಸಿ, ಸಂಜನಾ ಘೋರ್ಪಡೆ, ಸುಷ್ಮಾ ನೇಮಣ್ಣವರ, ಯೂನಸ್ ನದಾಫ್, ಸೃಷ್ಟಿ ಕಾಜಗಾರ, ಅಪ್ರೋಜ್ ಜಾಲೆಗಾರ ಮುಂತಾದ ಮಕ್ಕಳು ಭಾಗವಹಿಸಿದ್ದರು. ಗುಬ್ಬಚ್ಚಿ ಗೂಡು ಶಾಲೆಯ ಪ್ರಧಾನ ಗುರುಮಾತೆ ಲಕ್ಷ್ಮಿ ಜಾಧವ ಕಾರ್ಯಕ್ರಮವನ್ನು ಸಂಘಟಿಸಿದ್ದರು.