ರಂಗಭೂಮಿ ಸಮಾಜದ ನೈಜ ಪ್ರತಿಬಿಂಬ

ಕಲಬುರಗಿ: ಮಾ.28:ರಂಗಭೂಮಿ ನೆಡದಾಡುವ ವಿಶ್ವವಿದ್ಯಾಲಯವಾಗಿದೆ. ವಾಸ್ತವ ಸ್ಥಿತಿಯನ್ನು ದೊಡ್ಡದು ಅಥವಾ ಚಿಕ್ಕದಾಗಿ ಹೇಳದೆ, ಇರುವುದನ್ನು, ಇರುವ ಹಾಗೆಯೇ ಹೇಳುವ ರಂಗಭೂಮಿ, ಸಮಾಜದ ನೈಜ ಪ್ರತಿಬಿಂಬವಾಗಿದೆ. ಆದ್ದರಿಂದ ರಂಗಭೂಮಿ ಕಲಾವಿದರಿಗೆ ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಿದರೆ ಮಾತ್ರ ರಂಗಭೂಮಿ ಕ್ಷೇತ್ರ, ಕಲೆಗಳು, ಕಲಾವಿದರು ಉಳಿಯಲು ಸಾಧ್ಯವಿದೆ ಎಂದು ರಂಗಭೂಮಿ ಹವ್ಯಾಸಿ ಹಿರಿಯ ಕಲಾವಿದ ಶಾಂತಕುಮಾರ ಪಾಟೀಲ ನಂದೂರ ಅಭಿಮತಪಟ್ಟರು.

    ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ 'ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ 'ವಿಶ್ವ ರಂಗಭೂಮಿ ದಿನಾಚರಣೆ'ಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
    ಇಂದಿನ ಆಧುನಿಕತೆಯ ಡಿಜಿಲೀಕರಣದ ಯುಗದಲ್ಲಿ ನಾಟಕ ನೋಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇದರಿಂದ ಕಲಾವಿದರು ತಮ್ಮ ಜೀವನ ಸಾಗಿಸುವುದು ಕಷ್ಟವಾಗಿ, ಮತ್ತೊಂದು ವೃತ್ತಿಗೆ ತೆರಳಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರ ಕಲಾವಿದರಿಗೆ ಸೂಕ್ತ ಮಾಸಾಶನ, ಆರ್ಥಿಕ ಭದ್ರತಾ ಸೌಲಭ್ಯಗಳನ್ನು ನೀಡಬೇಕು. ನಾಟಕ ಅಥವಾ ರಂಗಭೂಮಿಯು ಸಮಾಜದಲ್ಲಿರುವ ಅಂಕು-ಡೊಂಕುಗಳು, ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಹಾರವನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತದೆ. ಆಧುನೀಕರಣದ ಇಂದಿನ ಯುಗದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಾಟಕ, ರಂಗಭೂಮಿ ಸಂಸ್ಕøತಿ, ಮೌಲ್ಯಗಳ ರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
   ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆಯ ಮುಖ್ಯಸ್ಥ ಡಾ.ಸತೀಶ್ ಟಿ.ಸಣಮನಿ ಮಾತನಾಡಿ, ಶಾಂತಕುಮಾರ ಪಾಟೀಲ ಅವರು ಹಿರಿಯ ರಂಗಭೂಮಿ ಕಲಾವಿದರು. ಅನೇಕ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಮ್ಮ ಭಾಗದ ಅನೇಕ ಕಲಾವಿದರಿಗೆ ಮಾರ್ಗದರ್ಶನ ಮಾಡಿ, ತಾವೊಬ್ಬ ಸ್ವತಃ ಕಲಾವಿದನಾಗಿದ್ದು, ಬೇರೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಅಪರೂಪದ ಕಲಾವಿದರಿಗೆ ಗುರ್ತಿಸಿ, ಅವರ ಕಲೆಗೆ ಗೌರವ ನೀಡುವ ಕಾರ್ಯ ಪ್ರಮುಖವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಕಲಾವಿದರಾದ ಶಾಂತಕುಮಾರ ಪಾಟೀಲ, ಬಸವಂತಪ್ಪ ಹೂಗಾರ, ಅಭಯ ಪ್ರಕಾಶ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಭೀಮಾಶಂಕರ ಘತ್ತರಗಿ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶರಣಬಸಪ್ಪ ನರೋಣಿ, ದೇವರಾಜ ಕನ್ನಡಗಿ, ಉರ್ಮಿಳಾ, ಪ್ರೀಯಾಂಕಾ, ಅಕ್ಷತಾ, ಅಶ್ವಿನಿ, ಆಕಾಶ ಸೇರಿದಂತೆ ಮತ್ತಿತರರಿದ್ದರು.