ರಂಗಭೂಮಿ ಶಿವಾನುಭವ ಮಂಟಪವಾಗಲಿ- ಡಾ. ಗಣೇಶ ಅಮೀನಗಡ

ವಿಜಯಪುರ, ಎ.20:ನಾಟಕವೆಂದರೆ ಅಲ್ಲಿ ಸಂಗೀತ ಕಚೇರಿ ಇರಲೇಬೇಕು. ಅಲ್ಲಿ ಮನರಂಜನೆಯೂ ಸಿಗುತ್ತಿರಬೇಕು. ಆದರೆ ದ್ವಂದ್ವಾರ್ಥದ, ಅಶ್ಲೀಲತೆಗೆ ಇಂಬುಕೊಡುವ ಸಂಭಾಷಣೆಗಳಿರದೆ ರಂಗಭೂಮಿ ಎನ್ನುವುದು ಶಿವಾನುಭವ ಮಂಟಪವಾಗಬೇಕು. ನಾಟಕ ಮಂಡಳಿ ಸಂಚಾರಿ ಪಾಠಶಾಲೆಯಾಗಬೇಕು ಎಂದು ಪತ್ರಕರ್ತರು ಹಾಗೂ ಲೇಖಕರಾದ ಮೈಸೂರಿನ ಡಾ. ಗಣೇಶ ಅಮೀನಗಡ ಅಭಿಪ್ರಾಯಪಟ್ಟರು.
ಅವರು ಭಾನುವಾರದಂದು ಎಸ್.ಎಂ. ಖೇಡಗಿ ಅಭಿನಂದನಾ ಸಮಿತಿ ಇವರ ಆಶ್ರಯದಲ್ಲಿ ವಿಜಯಪುರದ ಸಿಂದಗಿ ರಸ್ತೆಯಲ್ಲಿನ ವೀರೇಶ್ವರ ಕಂಪನಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಂಗಕರ್ಮಿ ಎಸ್.ಎಂ. ಖೇಡಗಿಯವರ ಕುರಿತು ಸಿದ್ದಗೊಂಡ ಅಭಿನಂದನ ಗ್ರಂಥ ‘ರಂಗಚೇತನ’ವನ್ನು ಲೋಕಾರ್ಪಣೆ ಮಾಡಿ ಗ್ರಂಥ ಪರಿಚಯ ಮಾಡುತ್ತ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ, ರಂಗಭೂಮಿಗೆ ಸಂಬಂಧಿಸಿದ ಆಕರಗ್ರಂಥದಂತೆ ತಯಾರುಗೊಂಡಿರುವ ರಂಗಚೇತನವು ಕಾಲೇಜು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಶಿಕ್ಷಕರು ಹಾಗೂ ರಂಗಭೂಮಿಯ ಆಸಕ್ತರು ಓದಲೇಬೇಕಾದಂತಹ ಗ್ರಂಥವಾಗಿದೆ. ಎಸ್.ಎಂ. ಖೇಡಗಿ ಅವರು ತಮ್ಮ ತಾರುಣ್ಯದ ದಿನಗಳಲ್ಲಿ ಬಾಲಿವುಡ್‍ಗೇನಾದರೂ ಎಂಟ್ರಿ ಕೊಟ್ಟಿದ್ದರೆ ಅಂದಿನ ಬಾಲಿವುಡ್‍ನ ಖ್ಯಾತನಟರ ಸಾಲಿನಲ್ಲಿ ನಿಂತಿರುತ್ತಿದ್ದರು. ರಂಗಚೇತನದ ಪ್ರತಿ ಪುಟವು ಓದಲು ಬಲು ರುಚಿಕರ ಹಾಗೂ ಸಂಗ್ರಹಯೋಗ್ಯವಾದುದಾಗಿದೆ ಎಂದು ನುಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿನಯವು ಎಲ್ಲರಿಗೂ ಒಲಿಯುವಂತಹುದಲ್ಲ. ಕಲೆಯು ದೈವೀ ಸಾಕ್ಷಾತ್ಕಾರವೇ ಸರಿ. ಆದರೆ ನಾಟಕಕಲೆಯಿಂದ ಸಮಾಜವನ್ನು ಅರಳಿಸುವ, ಬೆಸೆಯುವ ಕೆಲಸವಾಗಬೇಕಾಗಿದೆ. ಅಂತಹ ಅಪರೂಪದ ಸಾಧನೆಗೈದಿರುವುದಕ್ಕಾಗಿಯೇ ಡಾ. ರಾಜಕುಮಾರರಂತಹ ನಾಯಕರು ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ. ಅಂತೆಯೇ ನಮ್ಮ ಜಿಲ್ಲೆಯ ಎಸ್.ಎಂ. ಖೇಡಗಿ ಕೂಡ ರಂಗಭೂಮಿಯ ಶ್ರೇಷ್ಠನಟರಲ್ಲಿ ಒಬ್ಬರಾಗಿದ್ದಾರೆ ಎಂದು ನುಡಿದರು.
ರಂಗಚೇತನದ ಪ್ರಧಾನ ಸಂಪಾದಕ ಯು.ಎನ್. ಕುಂಟೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರ ಮೂರು ವರ್ಷಗಳ ಶ್ರಮದ ಫಲ ರಂಗಚೇತನ. 530ಕ್ಕೂ ಹೆಚ್ಚು ಪುಟಗಳ ಈ ಬೃಹತ್ ಹೊತ್ತಗೆಯಲ್ಲಿ ಏನುಂಟು, ಎನಿಲ್ಲ ಹೇಳಿ. ಇದರಲ್ಲಿ ರಂಗಭೂಮಿಯ ಮೃಷ್ಟಾನ್ನವೇ ಇದೆ. ಸಂಪಾದಕಮಂಡಳಿಯ ಶ್ರಮ ಸಾರ್ಥಕವಾಗಿದೆ. ಈ ದಿಸೆಯಲ್ಲಿ ಎಲ್ಲ ಲೇಖಕರು ಅಭಿನಂದನಾರ್ಹರು ಎಂದು ನುಡಿದರು.
ಬಾಗಲಕೋಟೆಯ ಎನ್.ಎ. ಮುಲ್ಲಾ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದಕ್ಕೂ ಮುನ್ನ ಆವರಣದಲ್ಲಿ ರಂಗಧ್ವಜಾರೋಹಣವನ್ನು ಮಾಡಲಾಯಿತು. ಅಭಿನಂದನ ಗ್ರಂಥಕ್ಕೆ ಭಾಜನರಾದ ರಂಗಕರ್ಮಿ ಎಸ್.ಎಂ. ಖೇಡಗಿ ಕೃತಜ್ಞತಾ ನುಡಿಗಳನ್ನು ನುಡಿದರು. ಎಸ್.ಎಂ. ಖೇಡಗಿಯವರಿಗೆ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯಸಂಘದ ಮಾಲಿಕರಾದ ಕತಾಲಸಾಬ್ ಬಣಗಾರ ಇವರಿಂದ ‘ನಾಟಕ ಸಾರ್ವಭೌಮ’ ಎಂಬ ಬಿರುದಿನೊಂದಿಗೆ 5 ಕೆ.ಜಿ. ತೂಕದ ಗಣೇಶ ಮೂರ್ತಿಯನ್ನು ನೀಡಿ ಗೌರವಿಸಿದರು.ಅನೇಕ ಸಂಘ-ಸಂಸ್ಥೆಗಳವರು ಗೌರವಿಸಿದರು. ಇದೇ ಸಂದರ್ಭದಲ್ಲಿ ಗ್ರಂಥದಾನಿಗಳಿಗೆ , ಸಂಪಾದಕ ಮಂಡಳಿಯವರಿಗೆ ಹಾಗೂ ಕಲಾವಿದರಿಗೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಎ. ಜಿದ್ದಿ, ಸಲೀಮಾ ಖೇಡಗಿ, ರಾಜೇಂದ್ರಕುಮಾರ್ ಬಿರಾದಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿ.ಎಸ್. ಖಾಡೆ, ಜಿ.ಎಸ್.ಕಮತರ, ಡಾ. ವಿ.ಎಂ. ಬಾಗಾಯತ್, ಶೇಷರಾವ ಮಾನೆ, ಡಾ. ಕಾಂತು ಇಂಡಿ, ಅಂಬರೀಷ ಪೂಜಾರಿ, ಬಸವರಾಜ ಬೀಳಗಿ, ದಾಕ್ಷಾಯಿಣಿ ಬಿರಾದಾರ, ಆಶಾರಾಣಿ, ರುಕ್ಷಾನಾ ನದಾಫ, ಪಾಕೀಜಾ ನದಾಫ, ಜಮೀರ ಖೇಡಗಿ, ಎ.ಜಿ. ಬಿರಾದಾರ, ಮಯೂರ ತಿಳಗೂಳಕರ, ಶಂಕರ ಭೈಚಬಾಳ, ಮಲ್ಲಿಕಾರ್ಜುನ ಭೃಂಗಿಮಠ, ರಂಗನಾಥ ಅಕ್ಕಲಕೋಟ, ಅಂಬಾದಾಸ ಜೋಶಿ, ಕೆ.ಸಿ. ಶೇಖ್, ಸಿದ್ದಲಿಂಗ ಹದಿಮೂರ, ನವೀದ ಅಂಜುಮ್, ಎಸ್.ಡಿ. ಮಾದನಶೆಟ್ಟಿ, ಶಕ್ತಿಕುಮಾರ ಉಕುಮನಾಳ, ಎಸ್.ಎಲ್. ರಾಠೋಡ ಮತ್ತಿತರರು ಉಪಸ್ಥಿತರಿದ್ದರು.
ಡಾ. ಹರೀಶ ಹೆಗಡೆ ಮತ್ತು ತಂಡ ರಂಗಚೇತನ ಗೀತೆ ಹಾಡಿದರು. ಸೋಮಶೇಖರ ಕುರ್ಲೆ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಮಹಾದೇವ ರೆಬಿನಾಳ, ಶಿಲ್ಪಾ ಭಸ್ಮೆ ನಿರೂಪಿಸಿದರು. ಸುಭಾಸಚಂದ್ರ ಕನ್ನೂರ ವಂದಿಸಿದರು.