ರಂಗಭೂಮಿ ಕಲಾವಿದರಿಗೆ ಸನ್ಮಾನ

ಕೆಂಭಾವಿ:ಜ.13:ತಂತ್ರಜ್ಞಾನದ ಪ್ರಭಾವದಿಂದ ನಾಟಕಗಳತ್ತ ಜನತೆಯ ಒಲವು ಕಡಿಮೆಯಾಗಿದೆ. ವೃತ್ತಿ ರಂಗಭೂಮಿ ಕಲಾವಿದರ ತೆರೆಯ ಹಿಂದಿನ ಬದುಕು ಬರಡಾಗುತ್ತಿದೆ ಎಂದು ಕಲಾ ಪ್ರೇಮಿ ಶಿಕ್ಷಕ ಖಾಜಾಮೈನುದ್ದಿನ ಹೇಳಿದರು.
ಪಟ್ಟಣದಲ್ಲಿ ಬೀಡುಬಿಟ್ಟಿರುವ ಶ್ರೀಗುರು ವಿಶ್ವರಾಧ್ಯ ನಾಟ್ಯ ಸಂಘದ ವೃತ್ತಿ ರಂಗಭೂಮಿ ಕಲಾವಿದರಿಗೆ ಕಲಾಪ್ರೇಮಿ ಬಳಗದಿಂದ ಹಮ್ಮಿಕೊಂಡ ಕಲಾವಿದರಿಗೆ ವಿಶೇಷ ಸನ್ಮಾನ ಹಾಗೂ ಗೌರವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಧುನಿಕ ಭರಾಟೆಯಿಂದ ನಾಟಕಗಳ ನೋಡುಗರ ಸಂಖ್ಯೆ ಕುಸಿದಿದೆ. ಜನತೆಯಲ್ಲಿ ಮೊದಲಿದ್ದ ಉತ್ಸಾಹ ಕಾಣುತ್ತಿಲ್ಲ, ಕಲೆಗೆ ಪ್ರೋತ್ಸಾಹ ಸಿಗುತ್ತಿಲ್ಲ. ಬಣ್ಣದ ಬದುಕು ನಿಜ ಬದುಕು ಕಟ್ಟಿಕೊಳ್ಳಲಾಗದ ಸ್ಥಿತಿಗೆ ಬಂದೊದಿಗೆ ಕಲೆಯನ್ನು ಉಳಿಸಿ ಬೆಳೆಸುವ ಜವಬ್ಧಾರಿ ನಾಡಿನ ಕಲಾ ಪ್ರೇಮಿಗಳಾದ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಲಾಪ್ರೇಮಿ ಬಳಗದಿಂದ ಕಂಪನಿಯ ಮಾಲಿಕರಾದ ಅಯ್ಯಣ್ಣ ಸ್ವಾಮಿ ಹಿರೇಮಠ ಹಾಗೂ ಮ್ಯಾನೇಜರ ಶಂಕ್ರಯ್ಯ ಸ್ವಾಮಿ ವಂದಗನೂರ್ ಸೇರಿದಂತೆ ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುಂಚೆ ರಂಗಭೂಮಿಯ ಎಲ್ಲಾ ಕಲಾ ಬಳಗಕ್ಕೂ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಲಾಯಿತು.
ಸಮಾರಂಭದಲ್ಲಿ ಕಲಾ ಪ್ರೇಮಿಗಳಾದ ಅಶೋಕ ಶಿವಣಗಿ, ಯಮನಪ್ಪ ಆಲ್ದಾಳ್, ಸಂಗಣ್ಣ ಅಸಂತಾಪುರ ಕಂಪನಿಯ ಕಲಾವಿದರಾದ ಕಿಟ್ಟಿ ಉಡುಪಿ, ಅಪ್ಪು ಮುದೋಳ್, ಮಂಜುಳಾ ಬಿಳವಾರ್, ನಾಗರಾಜ್ ಗೋಕಾಕ್, ಪ್ರವೀಣ, ಭದ್ರಿ ಗೋಕಾಕ್, ರಾಜಮ್ಮ ವಿಜಾಪುರ, ಗಂಗಾಧರ ಯರಗಟ್ಟಿ, ಅಶೋಕ ಸುಳೈ, ಉಮಾ ಮೈಂದರ್ಗಿ, ಕಲಾ ಜೀವಾಪುರ, ಮೀನಾಕ್ಷಿ ವಿಜಯಪುರ ಸೇರಿದಂತೆ ಇತರರು ಇದ್ದರು