ರಂಗಭೂಮಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ

ಗೌರಿಬಿದನೂರು,ಸೆ.೫- ನಗರದ ಡಾ.ಎಚ್.ಎನ್ ಕಲಾಭವನದಲ್ಲಿ ಶನಿವಾರ ಆಹಾರ್ಯ ಹಾಗೂ ಗೌತಮಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಸಹಯೋಗದೊಂದಿಗೆ ರಾಮಕೃಷ್ಣ ಬೆಳ್ತೂರು ನಿರ್ದೇಶನದ ಕೆ.ವೈ.ನಾರಾಯಣಸ್ವಾಮಿ ರಚಿಸಿರುವ ’ವಿನುರ ವೇಮನ’ ನಾಟಕ ಪ್ರದರ್ಶನ ನಡೆಯಿತು.
ಈ ವೇಳೆ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ನಾಟಕ ಮತ್ತು ರಂಗಭೂಮಿ ಕಲೆಯು ಕಲಾವಿದರಿಗೆ ಜೀವಾಳವಾಗಿದ್ದು ಪ್ರೇಕ್ಷಕರು ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾಗಿದೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಭರಾಟೆಯಲ್ಲಿ ನಶಿಸುತ್ತಿರುವ ದೇಶೀಯ ಕಲೆ, ಸಾಹಿತ್ಯ, ಸಂಸ್ಕೃತಿಗಳ ಜತೆಗೆ ರಂಗಭೂಮಿ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಹಿರಿಯ ಕೆಎಎಸ್ ಅಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿ ಮಾತನಾಡಿ, ಇಂದಿನ ನಾಟಕ ಪ್ರದರ್ಶನವು ಅತ್ಯಧ್ಬುತವಾಗಿ ಮೂಡಿಬಂದಿದ್ದು, ಪ್ರತೀ ಹಂತದಲ್ಲೀ ನೈಜ ಭಾವನೆಗಳು ಮೂಡುತ್ತಿದ್ದವು. ಯೋಗಿವೇಮನ ಜೀವನ ಮತ್ತು ಸಮಾಜ ಸುಧಾರಣೆಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಪ್ರತೀ ಪಾತ್ರಧಾರಿಯು ನಾಟಕದ ಮೂಲಕ ಪ್ರದರ್ಶನ ಮಾಡಿ ತಿಳಿಸಿದ್ದಾರೆ. ಜತೆಗೆ ಸರ್ವಜ್ಞ ಮತ್ತು ಯೋಗಿವೇಮನ ವಿಚಾರಧಾರೆಗಳಿಗೆ ಪರಸ್ಪರ ಸಂಬಂಧವಿರುವ ಬಗ್ಗೆ ಮೊದಲ ಬಾರಿಗೆ ನಾಟಕದ ಮೂಲಕ ಅರಿಯುವಂತಾಯಿತು. ಕಲಾವಿದರ ಬದುಕು ಸಂಕಷ್ಟದಲ್ಲಿದ್ದರೂ ಕೂಡ ರಂಗಭೂಮಿ ಕಲೆಯನ್ನು ಜೀವಂತಗೊಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ.ಎನ್.ಮಧುಸೂದನರೆಡ್ಡಿ, ಗೌತಮಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾದ ವೈ.ಟಿ.ಪ್ರಸನ್ನ ಕುಮಾರ್, ಮುಖಂಡರಾದ ಸಿ.ಜಿ.ಗಂಗಪ್ಪ, ಜಿ.ಸೋಮಯ್ಯ, ವೀರಣ್ಣ, ಕೆ.ವಿ.ಪ್ರಕಾಶ್, ಕಲಾವಿದ ರಾಮಕೃಷ್ಣ, ಅಮಾಸ ವಿಶ್ವನಾಥ್, ಶಿವಾರೆಡ್ಡಿ, ಇತರರು ಭಾಗವಹಿಸಿದ್ದರು.