ರಂಗಭೂಮಿಯ ಪರಂಪರೆ ಇಂದಿಗೂ ನಿರಂತರ – ಡಿ. ಹನುಮಕ್ಕ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.11:  ಕನ್ನಡ ರಂಗಭೂಮಿಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ವಿಶಿಷ್ಟ ಸ್ಥಾನಮಾನವಿದ್ದು, ಇಲ್ಲಿ ರಂಗಭೂಮಿ ಪರಂಪರೆ ಇಂದಿಗೂ ನಿರಂತರವಾಗಿರುವುದು ರಂಗಭೂಮಿ ಜೀವಂತವಾಗಿ ಉಳಿದು ಅನೇಕ ಕಲಾವಿದರು ಬೆಳೆಯುವುದಕ್ಕೆ ಕಾರಣವಾಗಿದೆ ಎಂದು ಹಿರಿಯ ರಂಗಕಲಾವಿದೆ ಹಾಗೂ ನಾಟಕ ಅಕಾಡೆಮಿ ಮಾಜಿ ಸದಸ್ಯೆ ಡಿ. ಹನುಮಕ್ಕ ಹೇಳಿದರು.
 ಅವರು ಪಟ್ಟಣದ ದುರ್ಗಾದಾಸ್ ಕಲಾಮಂದಿರದಲ್ಲಿ ರಂಗಬಿಂಬ ಸಂಸ್ಥೆಯ ಮೊದಲ ವಾರ್ಷಿಕೋತ್ಸವ ಹಾಗೂ ಶರೀಫ ನಾಟಕ ಪ್ರದರ್ಶನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಗೆ ಮೊಬೈಲೇ ಜಗತ್ತಾಗಿದ್ದು, ವಾಸ್ತವದ ಜಗತ್ತಿನಲ್ಲಿ, ಹಿಂದಿನ ಕಾಲಮಾನ ಘಟ್ಟದಲ್ಲಿ ಎಂತೆಂತಹ ಸಾಧಕರು, ಶರಣರು, ಮಹಾತ್ಮರು ಈ ನಾಡಿನಲ್ಲಿ ಹುಟ್ಟಿರುವಂತಹ ಅನೇಕ ಮಹಾಪುರುಷರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳದೇ ಕೇವಲ ಮೊಬೈಲ್‌ನಲ್ಲಿಯೇ ಮುಳಿಗಿರುವಂತಹ ಸಂದರ್ಭದಲ್ಲಿ ರಂಗಬಿಂಬ ಕಲಾ ಸಂಸ್ಥೆಯವರು ಶರೀಫ ನಾಟಕ ಪ್ರದರ್ಶಿಸಿ ಇಂದಿನ ಯುವ ಪೀಳಿಗೆಗೆ ಮಾಹಾತ್ಮರನ್ನು ಪರಿಚಯಿಸುವ ಜಾಗೃತಿ ಕೆಲಸ ಪ್ರಶಂಸನೀಯ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ರಂಗಚಟುವಟಿಕೆಗಳು ಮರಿಯಮ್ಮನಹಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವುದರಿಂದ ಈ ಊರು ಕಲಾವಿದರ ತವರೂರಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾ.ನಿ.ಪ.ವಿಜಯನಗರ ಜಿಲ್ಲಾಧ್ಯಕ್ಷ ಪಿ. ಸತ್ಯನಾರಾಯಣ ಮಾತನಾಡಿ, ಮರಿಯಮ್ಮನಹಳ್ಳಿಗೆ ರಂಗಭೂಮಿಯಲ್ಲಿ ಒಂದು ವಿಶಿಷ್ಟ ಸ್ಥಾನವಿದ್ದು, ಇಲ್ಲಿನ ಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ಕಲಾವಿದರಾಗಿ ಗುರುತಿಸಿಕೊಂಡು ಬೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಮೊದಲನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ರಂಗಬಿಂಬ ಸಂಸ್ಥೆಯು ನಾಡಿನಾದ್ಯಂತ ಉತ್ತಮ ಹೆಸರು ಗಳಿಸಲಿ. ಇಲ್ಲಿನ ರಂಗಕಲಾವಿದರು ನಾಡಿನ ರಂಗಭೂಮಿಯ ವಾರಸುದಾರರು ಎಂಬುದನ್ನು ಮರಿಯಮ್ಮನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಸಾಕ್ಷೀಕರಿಸಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಪೂಜಾರ್ ವೆಂಕೋಬ ನಾಯಕ ಮಾತನಾಡಿ, ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಕಲಾವಿದರು ಬೆಳೆಯಲು ಸಾಧ್ಯ, ಇಲ್ಲಿನ ಕಲಾವಿದರಿಗೆ ಪ್ರೇಕ್ಷಕರ ಪ್ರೇರಣೆ ಸಿಗುತ್ತಿರುವುದರಿಂದ ಪ್ರತಿಭಾವಂತ ಕಲಾವಿದರಿಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ದೊರೆಯುತ್ತಿವೆ. ಸಿ.ಕೆ.ನಾಗರಾಜ ನೇತೃತ್ವದ ರಂಗಬಿಂಬ ಸಂಸ್ಥೆಗೂ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಲಲಿತಕಲಾ ರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ರಂಗಬಿಂಬದ ಅಧ್ಯಕ್ಷೆ ಎಂ. ಗಾಯಿತ್ರಿದೇವಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ರಂಗ ಸಂಘಟಕ ವಡಿಗೇರಿ ವಿರೂಪಾಕ್ಷಪ್ಪ, ರಂಗಕರ್ಮಿ ಎಂ.ಜಿ.ಶಿವನಾಗಪ್ಪರನ್ನು ಗೌರವಿಸಲಾಯಿತು. ಜೊತೆಗೆ ಕಲಾವಿದರಾದ ಹನುಮಯ್ಯ, ಮಹಾಂತೇಶ ನೆಲ್ಲುಕುದುರೆ, ಮೌನೇಶ, ಚಂದ್ರು ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕೆ. ನಾಗರಾಜ ಸ್ವಾಗತಿಸಿ, ಸಿ.ಕೆ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಚಿಡಿ ಕೊಟ್ರೇಶ ವಂದಿಸಿ, ಪಿ. ರಾಮಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ರಂಗಬಿಂಬ ಕಲಾವಿದರಿಂದ ಮಂಜುನಾಥ ಬೆಳಕೆರಿ ರಚನೆಯ ಸಿ.ಕೆ.ನಾಗರಾಜ ನಿರ್ದೇಶನದ ಶರೀಫ ನಾಟಕ ಪ್ರದರ್ಶನ ನಡೆಯಿತು. ನಾಟಕದ ಹಿನ್ಜಲೆ ಗಾಯನ ಮಲ್ಲಪ್ಪ ಗೊಲ್ಲರಹಳ್ಳಿ, ತಬಲ ಸಾಥ್ ಜಿ.ಕೆ. ಮೌನೇಶ್ ಗೊಲ್ಲರಹಳ್ಳಿ, ಕೆ. ಹಾರ್ಮೋನಿಯಂ ತಿಪ್ಪಣ್ಣ ಗೊಲ್ಲರಹಳ್ಳಿ ಸಂಗೀತಕ್ಕೆ ಸಾಥ್ ನೀಡಿದರು.