ರಂಗಭೂಮಿಯ ತೊಟ್ಟಿಲಿಗೆ ಮಕ್ಕಳನ್ನು ಹಾಕಿ: ಮಂಜಮ್ಮ ಜೋಗತಿ

ಹೊಸಪೇಟೆ ಡಿ 31 :ರಂಗಭೂಮಿ ಸಾಗರವಿದ್ದಂತೆ, ಇಲ್ಲಿ ಪ್ರತಿಯೊಬ್ಬರಿಗೂ ಒಂದು ಬದುಕು ಸಿಕ್ಕುತ್ತದೆ. ಪ್ರತಿ ಪೋಷಕರು ತಮ್ಮ ಮಕ್ಕಳನ್ನು ರಂಗಭೂಮಿಯ ತೊಟ್ಟಿಲಿಗೆ ಹಾಕಬೇಕು ಎಂದು ಹಿರಿಯ ಕಲಾವಿದೆ ಹಾಗೂ ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮರಿಯಮ್ಮನಹಳ್ಳಿಯ ರಂಗಚೌಕಿ ಕಲಾಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಚೌಕಿ ಚಂದ್ರಮ ಮಾಸಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜಮ್ಮ ಜೋಗತಿ ಅವರು ಮಾತನಾಡಿದರು.
ಮರಿಯಮ್ಮನಹಳ್ಳಿಯು ಕಲೆಯ ತವರೂರು ಆಗಿದ್ದು, ಇಲ್ಲಿ ಬಣ್ಣ ಮಾರುವವನಿಂದ ಹಿಡಿದು ಬಣ್ಣ ಹಚ್ಚುವವರಿಗೂ ಬದುಕನ್ನು ಕಟ್ಟಿಕೊಟ್ಟಿದೆ. ಬರಹಗಾರ ಗುಡಿಹಳ್ಳಿ ನಾಗರಾಜ್ ಅವರು ತಮ್ಮ ಕಲಾಗ್ರಾಮ ಮರಿಯಮ್ಮನಹಳ್ಳಿ ಪುಸ್ತಕದಲ್ಲಿ ಉಲ್ಲೇಖಿಸಿದಂತೆ ಈ ಊರಿನ ಯಾವಪ್ರದೇಶದಿಂದ ಕಲ್ಲು ತೂರಿದರೂ ಅದು ಕಲಾವಿದನ ಮನೆಗೆ ಬೀಳುತ್ತದೆ ಎಂಬ ಮಾತು ಅಕ್ಷರಶಃ ನಿಜವಾಗಿದೆ ಎಂದರು.
ನಂತರ ಮಾತನಾಡಿದ ಮುಖ್ಯ ಅತಿಥಿ ಪ್ರಕಾಶ್ ಬಿ.ಎಂ.ಎಸ್ ಅವರು ರಂಗಭೂಮಿ ಪ್ರತಿಯೊಂದು ಘಟ್ಟದ ವಿಮರ್ಶೆಯನ್ನು ಮಾಡುತ್ತದೆ ಎಂದರು.
ಚೌಕಿ ಚಂದ್ರಮ ಮಾಸಿಕ ಕಾರ್ಯಕ್ರಮದ ಅಂಗವಾಗಿ ಸರದಾರ ಬಿ. ನಿನಾಸಂ ವಸ್ತ್ರವಿನ್ಯಾಸ ಮಾಡಿ ನಿರ್ದೇಶಿಸಿದ ಮದ್ದಿಗಿಂತ ಮುನ್ನೆಚ್ಚರಿಕೆ ಮೇಲು ಎಂಬ ನಾಟಕವನ್ನು ಬಿ.ಮಂಜುಳ ತಂಡದವರು ಪ್ರದರ್ಶಿಸಿದರು ಹಾಗೂ ಬಿ.ದೇವರಾಜ್ ತಂಡದ ಕಂಸಾಳೆ ಪ್ರದರ್ಶನ ನೋಡುಗರ ಹೃನ್ಮನ ತಣಿಸಿತು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದೆ ಕೆ.ನಾಗರತ್ನಮ್ಮ, ಬಿ.ಎಂ.ಎಸ್.ಪ್ರಭು, ದುರ್ಗಮ್ಮ, ಪುಷ್ಪ ಸೇರಿದಂತೆ ರಂಗಾಸಕ್ತರು ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಲತಾ ಪ್ರಕಾಶ್ ವಹಿಸಿದ್ದರು.