ರಂಗಭೂಮಿಯಲ್ಲಿ ವಿನೂತನ ಪ್ರಯೋಗ ಅಗತ್ಯ

ಧಾರವಾಡ ನ.14: ಸಂಸ್ಕøತಿಗಳ ತವರೂರಾದ ಪೇಡಾನಗರಿಯಲ್ಲಿ ರಂಗಾಯಣವನ್ನು ಸ್ಥಾಪನೆ ಮಾಡಬೇಕು ಎಂದು ಹಲವಾರು ರಂಗಕರ್ಮಿಗಳು, ಕಲಾವಿದರು ಹಾಗೂ ರಂಗಾಸಕ್ತರ ಕೂಗಾಗಿತ್ತು. ಅದರಂತೆ ಇಂದು ರಂಗಾಯಣ ಹಲವಾರು ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ರಂಗಭೂಮಿಯನ್ನು ಬೆಳೆಸುತ್ತಿದೆ ಎಂದು ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಛೇರಿ ಸಂಯೋಜಕರು ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ ಶಾಸ್ತ್ರೀ ಅವರು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಂಗಾಯಣದ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಧಾರವಾಡ ರಂಗಾಯಣವು ಮೈಸೂರು ರಂಗಾಯಣದ ಮಾದರಿಯಂತೆ ರಂಗ ತರಬೇತಿ ಹಾಗೂ ಅಕಾಡೆಮಿ ಕೋರ್ಸ್‍ಗಳನ್ನು ಆರಂಭಿಸುವ ಮೂಲಕ ಮಕ್ಕಳು ಹಾಗೂ ಯುವಕರಿಗೆ ರಂಗತರಬೇತಿಯನ್ನು ನೀಡಿ, ಬೆಳೆಸಬೇಕು. ರಂಗಭೂಮಿ ಮತ್ತು ಸಿನಿಮಾವನ್ನು ಒಂದುಗೂಡಿಸಿ, ರಂಗಭೂಮಿಯಲ್ಲಿ ವಿನೂತನ ಪ್ರಯೋಗವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ರಂಗಸಮಾಜ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಮಾತನಾಡಿ, ಧಾರವಾಡ ರಂಗಾಯಣದಲ್ಲಿ ತರಬೇತಿಗಳನ್ನು ಆರಂಭಿಸುವ ಪ್ರಯತ್ನವನ್ನು ಮಾಡಬೇಕಿದೆ. ಇದರಿಂದ ಹಲವಾರು ಕಲಾವಿದರಿಗೆ ಸಹಕಾರ ನೀಡಿದಂತಾಗುತ್ತದೆ. ಪ್ರತಿಯೊಬ್ಬರ ಜೀವನದುದ್ದಕ್ಕೂ ದ್ವಂದ್ವಗಳು ಹುಟ್ಟಿಕೊಳ್ಳುತ್ತವೆ. ದ್ವಂದ್ವಗಳಿಲ್ಲದೆ ಮನುಷ್ಯನಿಲ್ಲ ಎಂಬ ಸಂದೇಶವನ್ನು ದ್ವಂದ್ವ' ನಾಟಕವೂ ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. ಸಾಹಿತಿಗಳಾದ ಡಾ. ಬಾಳಣ್ಣ ಶೀಗೀಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಟಕಗಳು ದೃಶ್ಯ ಮತ್ತು ಶ್ರವ್ಯದಿಂದ ಕೂಡಿದ ಶಕ್ತಿಯುತವಾದ ಮಾಧ್ಯಮವಾಗಿದೆ. ರಂಗಾಸಕ್ತರನ್ನು ಕೆರಳಿಸುವ, ಅಳಿಸುವ ಹಾಗೂ ನಗಿಸುವ ಶಕ್ತಿ ನಾಟಕಗಳಲ್ಲಿ ಅಡಗಿರುತ್ತದೆ. ಅದನ್ನು ಬಳಸಿಕೊಂಡು ಸಂಯಮ, ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕು. ನಾಟಕಗಳ ಕುರಿತಾಗಿ ಹೆಚ್ಚು ಹೆಚ್ಚು ವಿಮರ್ಶೆಗಳು ಬಂದರೆ ನಾಟಕ ನಿರ್ದೇಶಕರಿಗೂ ನಾಟಕದ ಕುರಿತು ನೋಡುಗರ ಮನಸ್ಥಿತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ವಿಜಯೀಂದ್ರ ಅರ್ಚಕ ನಿರ್ದೇಶಿಸಿ, ಸೋಮು ರೆಡ್ಡಿ ರಚಿಸಿ, ಸಹನಿರ್ದೇಶನ ಮಾಡಿದದ್ವಂದ್ವ’ ನಾಟಕವನ್ನು ಸ್ನೇಹಿತರು ಕಲಾ ಸಂಘ ಕಲಾವಿದರು ಪ್ರದರ್ಶಿಸಿದರು.