ರಂಗಭೂಮಿಯಲ್ಲಿ ಬೆಳೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯ

ಕಲಬುರಗಿ:ಮಾ.27: ಕಲಾ ಜೀವಂತಿಕೆಯನ್ನು ಸದಾಕಾಲ ಹಿಡಿದಿಟ್ಟುಕೊಂಡು ರಂಗಭೂಮಿಯಲ್ಲಿ ಬೆಳೆಯಬೇಕೆಂದರೆ ಕಠಿಣ ಪರಿಶ್ರಮ ಅಗತ್ಯ ಎಂದು ಹಿರಿಯ ರಂಗಕರ್ಮಿ ಅಮರ ಪ್ರೀಯ ಹಿರೇಮಠ ಅವರು ಅಭಿಪ್ರಾಯಪಟ್ಟರು.
ಶನಿವಾರ ಕಲಬುರಗಿ ರಂಗಾಯಣದ ಅಡಿಟೋಡಿಯಂ ಹಾಲ್‍ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡೋಲಕ್ ಬಾರಿಸುವ ಮೂಲಕ ಉದ್ಫಾಟಿಸಿ ಮಾತನಾಡಿದರು.
ಕಲೆ ಯಾರಲ್ಲಿ ಅಡಗಿರುತ್ತೋ ಅವರಿಗೆ ರಂಗಭೂಮಿ ಕೈಬಿಸಿ ಕರೆಯುತ್ತದೆ. 45 ವರ್ಷದಿಂದ ರಂಗಭೂಮಿಯಲ್ಲಿ ಇದ್ದು, ನನಗೆ ತುಂಬಾ ಸಂತೋಷ ತಂದಿದೆ. ಪ್ರತಿಯೊಂದು ಕಲೆ ಶ್ರೇಷ್ಠವಾಗಿರುತ್ತದೆ, ಅದರಲ್ಲಿ ಭಾಗವಹಿಸಿದಾಗ ಮಾತ್ರ ಅದರ ಮಹತ್ವ ಅರಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ರಂಗ ಗೌರವ ಸನ್ಮಾನ ಸ್ವೀಕರಿಸಿದ ಹಿರಿಯ ನಾಟಕಕಾರ ಸುಬ್ರಾವ ಕುಲಕರ್ಣಿ ಅವರು ಮಾತನಾಡಿ, ನಾಟಕ ಒಂದು ಕಲೆಯಾಗಿರುವುದರಿಂದ ನಾಟಕ ಕಥಾ ನಿರೂಪಣೆಯೂ ವೈಶಿಷ್ಟಗಳಿಂದ ಕೂಡಿರಬೇಕು. ನಾಟಕಗಳು ಕೇವಲ ಮನೋರಂಜನೆಯಾಗದೇ ಚಿರಸ್ಥಾಯಿಯಾದ ವಿಚಾರಗಳನ್ನು ಹೊಂದಿ ಮಾನವನ ಆತ್ಮ ವಿಕಾಸದ ಕಡೆಗೆ ಸಾಗಲು ಸಹಕಾರಿಯಾಗಬೇಕು. ಹಿಂದಿನ ಯಕ್ಷಗಾನ, ಬಯಲಾಟಗಳು ಇಂದಿನವರೆಗೆ ಉಳಿಸಿಕೊಂಡು ಬಂದಿರುವುದು ರಂಗಭೂಮಿಯ ಶಕ್ತಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಂಗ ಕಲಾವಿದೆ ಆಶಾ ಚಿತ್ರಶೇಖರ ಕಂಠಿ ಅವರು ಮಾತನಾಡಿ, ವಿವಿಧ ಕಲೆಗಳ ಸಮ್ಮಿಲನದ ರಂಗಭೂಮಿಗೆ ಉನ್ನತ ಸ್ಥಾನವಿದೆ. ಅಭಿನಯ, ಹಾಡುಗಾರಿಕೆ, ಚಿತ್ರಕಲೆ, ಮಾಡಲಿಂಗ್ ಹೀಗೆ ರಂಗ ಮಂಚದಲ್ಲಿ ಅನೇಕ ಕಲಾ ಪ್ರಕಾರಗಳನ್ನು ಕಾಣಬಹುದು. ಪ್ರತಿಯೊಬ್ಬರ ಅಭಿರುಚಿಗೆ ರಂಗಭೂಮಿ ವೇದಿಕೆಯಾಗಿ ನಿಲ್ಲುತ್ತದೆ ಎಂದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಆಡಳಿತಾಧಿಕಾರಿ ದತ್ತಪ್ತ ಸಾಗನೂರ ಅವರು ವಿಶ್ವ ರಂಗಭೂಮಿ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.