ರಂಗಭೂಮಿಗೆ ರಾಮಾಯಣ, ಮಹಾಭಾರತ ಕತೆಗಳೇ ಪ್ರೇರಣೆ

ಕಲಬುರಗಿ,ಮಾ.28-ಭಾರತೀಯ ರಂಗಭೂಮಿಗೆ ಶತಶತಮಾನಗಳ ಇತಿಹಾಸ ಮತ್ತು ಪರಂಪರೆ ಇದೆ. ಒಂದು ಪ್ರಾಚೀನ ಜನಪದ ರಂಗಭೂಮಿಯ ಇನ್ನೊಂದು ನಾಟ್ಯಶಾಸ್ತ್ರಕಿಂತ ಪೂರ್ವದಲ್ಲಿ ಜಾನಪದ ರಂಗಭೂಮಿಯ ಪ್ರಯೋಗಗಳು ಜನಸಮುದಾಯದಲ್ಲಿ ರೂಢಿಯಲ್ಲಿದ್ದವು. ಜನಪದ ರಂಗಭೂಮಿಗೆ ರಾಮಾಯಣ ಮತ್ತು ಮಹಾಭಾರತ ಕಥೆಗಳು ಪ್ರೇರಣೆ ನೀಡಿವೆ ಎಂದು ಯುವ ಸಾಹಿತಿ ಸಂಗಪ್ಪ ತೌಡಿ ಅವರು ಹೇಳಿದರು.
ನಗರದ ಸಿದ್ದಲಿಂಗೇಶ್ವರ ಬುಕ್ ಮಾಲಿನಲ್ಲಿ ನಡೆದ ಅಟ್ಟದ ಮೇಲೆ ಬೆಟ್ಟದ ವಿಚಾರ ಕಾರ್ಯಕ್ರಮದಲ್ಲಿ ಡಾ.ಗವಿಸಿದ್ದಪ್ಪ ಪಾಟೀಲ್ ಅವರು ರಚಿಸಿರುವ “ರಂಗಸಿರಿ” ಕೃತಿ ಕುರಿತು ಮಾತನಾಡುತ್ತ, “ಕಲ್ಯಾಣ ಕರ್ನಾಟಕದ ರಂಗಭೂಮಿಯನ್ನು ಕುರಿತು ಇಷ್ಟು ದೊಡ್ಡ ಗ್ರಂಥವನ್ನು ಹೊರಬಂದಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಈ ಕೃತಿಯಲ್ಲಿ ಲೇಖಕರು ರಂಗಭೂಮಿಯ ಬೆಳವಣಿಗೆ ಮತ್ತದರ ಚಾರಿತ್ರಿಕ ವಿವರಣೆಯನ್ನು ನೀಡುವುದರ ಜೊತೆಗೆ ರಂಗಭೂಮಿಯ ಪ್ರಕಾರಗಳನ್ನು ಚರ್ಚಿಸಿದ್ದಾರೆ. ಮರಾಠಿ ರಂಗಭೂಮಿಯ ವಿಷ್ಣುದಾಸ ಭಾವೆಯವರು ಕರಾವಳಿಯ ಭಾಗವತ ಮೇಳ ನೋಡಿ ಪ್ರಭಾವಿತರಾಗಿ ಕನ್ನಡ ನಾಟಕ ಮಾದರಿಯ ಮರಾಠಿ ನಾಟಕ ಬರೆದಿದ್ದನ್ನು, ಶಾಂತಕವಿಗಳ ರಂಗ ಸಂವೇದನೆಯನ್ನು ಗಾಡವಾಗಿ ಚರ್ಚಿಸುತ್ತ ವೃತ್ತಿ ರಂಗಭೂಮಿ ಬಗೆಗಳನ್ನು ಬೆಳೆದು ಬಂದ ಚರಿತ್ರೆಯನ್ನು ರಂಗಸಿರಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಇದರಂತೆ ಸಂಗ್ಯಾ ಬಾಳ್ಯಾ, ಯಯಾತಿ, ಮಹಾಚೈತ್ರ ಮತ್ತು ಮುಖ್ಯಮಂತ್ರಿ ನಾಟಕಗಳು ಜನರ ಮೇಲೆ ಯಾವ ರೀತಿ ಪ್ರಭಾವ ಬೀರಿದವು ಎಂಬುವುದನ್ನು ದಾಖಲಿಸಿದ್ದಾರೆ. ಅಲ್ಲದೆ, ಕಲ್ಯಾಣ ಕರ್ನಾಟಕದ ರಂಗಭೂಮಿ ಇತಿಹಾಸ ಹಾಗೂ ಸಮಕಾಲೀನ ಆಗು ಹೋಗುಗಳನ್ನು ಆಳವಾಗಿ ಅಧ್ಯಯನ ಮಾಡುವುದರೊಂದಿಗೆ ಈ ಪುಸ್ತಕದಿಂದ ನಮ್ಮ ರಂಗಭೂಮಿಯ ಹಿರಿಮೆಗಳನ್ನು ಸ್ಥೂಲವಾಗಿ ಪರಿಚಯ ಮಾಡುವ ಕೆಲಸವನ್ನು ಮಾಡಿದ್ದಾರೆ” ಎಂದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ಮಾತನಾಡುತ್ತ , ” ಅಟ್ಟದ ಮೇಲೆ ಬೆಟ್ಟದಂಥ ವಿಚಾರ-ಪುಸ್ತಕ ವಿಮರ್ಶೆ ಕಾರ್ಯಕ್ರಮ ಯುವ ಬರಹಗಾರರು, ಲೇಖಕರಿಗೆ ಮತ್ತು ವಿಮರ್ಶಕರಿಗೆ ದಾರಿದೀಪವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಕಾಶಕಬಸವರಾಜ ಕೊನೇಕ್ ಮಾತನಾಡಿ “ಇಂದಿನ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದು ತುಂಬಾ ಖುಷಿ ಎನಿಸಿದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯ ಮಟ್ಟದ ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ವಿಮರ್ಶಾ ಕ್ಷೇತ್ರವನ್ನು ವಿಸ್ತರಿಸಬೇಕು ಎಂದರು. ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಗವಿಸಿದ್ದಪ್ಪ ಪಾಟೀಲ್, ಸಂಚಾಲಕರಾದ ಡಾ. ಶಿವರಾಜ್ ಪಾಟೀಲ್, ಡಾ. ಶ್ರೀನಿವಾಸ್ ಶಿರಾನೂರ್ಕರ್, ಸುಬ್ಬರಾವ್ ಕುಲಕರ್ಣಿ, ಪ. ಮನುಸಗರ್,ಡಾ. ಸ್ವಾಮೀರಾವ್ ಕುಲಕರ್ಣಿ, ಡಾ. ರೋಲೇಕರ್ ನಾರಾಯಣ, ಡಾ. ಕೆ. ಎಸ್. ಬಂಧು,ಹಿರಿಯರಾದ ಜಿ. ಬಿ. ಸಿದ್ದಬಟ್ಟೆ,ಡಾ. ಶರಣಪ್ಪ ಚಲವಾದಿ, ಡಾ. ಆನಂದ್ ಸಿದ್ದಮನಿ, ಡಾ. ಶರಣಮ್ಮ ಪಾಟೀಲ್, ಇದ್ದರು. ಡಾ. ಚಿ. ಸಿ. ನಿಂಗಣ್ಣ ಸ್ವಾಗತಿಸಿದರು, ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.