ರಂಗಭೂಮಿಗೆ ಜಗುಚಂದ್ರ ಕೊಡುಗೆ ಅಪಾರ

ಧಾರವಾಡ,ಏ22: ಗುರು ಶಿಷ್ಯ ಪರಂಪರೆ ಸಂಗೀತ ಕ್ಷೇತ್ರದಲ್ಲಿರುವಂತೆ ರಂಗಭೂಮಿಯಲ್ಲಿಯೂ ಸಹ ಹುಟ್ಟುಹಾಕುತ್ತಿರುವುದು ಸಂತೋಷ ವಿಚಾರ ಆ ಕಾರ್ಯವನ್ನು ಮೊದಲು ಜಗುಚಂದ್ರ ಅವರ ಶಿಷ್ಯ ಬಳಗ ಮಾಡುತ್ತಿರುವುದು ರಂಗಭೂಮಿಯ ಮತ್ತು ಮಕ್ಕಳ ರಂಗಭೂಮಿಯ ಕ್ಷೇತ್ರದ ಜಗುಚಂದ್ರ ಅವರ ಕಾರ್ಯದ ಪ್ರತಿಫಲ ಎಂದು ಹಿರಿಯ ರಂಗಕರ್ಮಿ ವಿಠ್ಠಲ ಕೊಪ್ಪದ ಹೇಳಿದರು.

ಅವರು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಂದ್ರ ಸ್ಪೂರ್ತಿ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆಯು ಹಮ್ಮಿಕೊಂಡ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಜಗುಚಂದ್ರ ಅವರು ಧಾರವಾಡದ ಶ್ರೀಮಂತ ರಂಗಭೂಮಿಗೆ ಬಹುಪಾಲು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ಜಗುಚಂದ್ರ ಅವರು ಶಿಷ್ಯಬಳಗವನ್ನು ಬಹಳ ಪ್ರೀತಿಯಿಂದ ರಂಗಕ್ಕೆ ತಂದವರು. ಅವರ ಅವರ ಆಸಕ್ತಿಗೆ ಅನುಗುಣವಾಗಿ ರಂಗದ ವಿವಿಧ ವಿಭಾಗದಲ್ಲಿ ಪರಿಣಿತರಾಗುವಂತೆ ಮಾಡಿದ ಹಿರಿಮೆ ಅವರದ್ದು. ಅಲ್ಲದೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಮಾಡಿದ್ದಂತೆ ಮಕ್ಕಳ ರಂಗಕ್ಕೂ ಅಷ್ಟೇ ಕಾರ್ಯಮಾಡಿದ್ದಾರೆ ಅದನ್ನು ನೆನಪಿಸುವ ಕಾರ್ಯವನ್ನು ಚಂದ್ರಸ್ಪೂರ್ತಿಯವರು ಮಾಡುತ್ತಿರುವುದು ಸಂತಸ ವಿಷಯ ಎಂದು ಹೇಳಿದರು.

ನಂತರ ವಿಜಯಕುಮಾರ ದೊಡಮನಿ ಅವರ ನಿರ್ದೇಶನದ ಮುನಿಸಿಪಾಲಿಟಿ ಮೇಬರ್ ಎಂಬ ನಾಟಕ ಪ್ರದರ್ಶನ ನಡೆಯಿತು. ಈ ನಾಟಕದಲ್ಲಿ ವಿಜಯಕುಮಾರ ದೊಡಮನಿ, ಕು.ಪಲ್ಲವಿ ರೇಗಿ, ಗುರುನಾಥ ಬೇನಕನ್ನವರ, ಬಸವರಾಜ ಹುಳ್ಳಿಹಳಿ, ಮಹೇಶ ಪಟ್ಟಿಹಾಳ, ವಿಜಯ ಪಟ್ಟಿಹಾಳ, ಶ್ರೀಶೈಲ ಹಂಚಿನಾಳ, ಸಂದೀಪ ದೇಸಾಯಿ, ಮಂಜುನಾಥ ಅವರಾದಿ, ಹಲವರು ಪಾತ್ರ ನಿರ್ವಹಿಸಿದರು.

ಕಲಾವಿದ ಬಸವರಾಜ ಗುಡ್ಡಪ್ಪನವರ ಕಾರ್ಯಕ್ರಮ ನಿರೂಪಿಸಿದರು, ಸೋಮುಸೇಖರ ಕರಡಿ ಸ್ವಾಗತಿಸಿದರು.ಶೀತಲಕುಮಾರ ವಂದಿಸಿದರು. ಸ್ಪೂರ್ತಿ ಸುಣಗಾರ, ವಾಣಿಶ್ರೀ ಕುಲಕರ್ಣಿ,ಕಾವೇರಿ ನಾಗಣ್ಣವರ,ಶೃತಿ ಪಾಟೀಲ ಮುಂತಾದವರು ಹಾಜರಿದ್ದರು.