ರಂಗಭೂಮಿಗೆ ಎಲ್.ಬಿ.ಕೆ ಆಲ್ದಾಳರ ಕೊಡುಗೆ ಅಮೋಘ

ಕಲಬುರಗಿ:ಎ.13: ಹಿರಿಯ ರಂಗಕರ್ಮಿ ಎಲ್.ಬಿ.ಕೆ ಆಲ್ದಾಳ ಅವರು ಅನೇಕ ನಾಟಕಗಳು, ಕಥೆ, ಕಾದಂಬರಿಗಳು ಸೇರಿದಂತೆ 125ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ ರಂಗಭೂಮಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕøತ ಅವರು, ರಂಗಭೂಮಿ ಕ್ಷೇತ್ರದ ದೊಡ್ಡ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಷ್ಕøತ ನಮ್ಮ ಭಾಗದ ಏಕೈಕ ಹಿರಿಯ ಕಲಾವಿದರಾಗಿದ್ದಾರೆಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಎಲ್.ಬಿ.ಕೆ ಆಲ್ದಾಳರಿಗೆ ನುಡಿನಮನ’ದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ಆಲ್ದಾಳ್ ಅವರು ರಂಗಭೂಮಿಯ ಅನನ್ಯತೆ ಸಂತ, ದಿಗ್ಗಜ, ಚಲಿಸುವ ವಿಶ್ವವಿದ್ಯಾನಿಲಯವಾಗಿದ್ದರು. ಅವರಲ್ಲಿರುವ ಕಲಾಭಕ್ತಿ ಎಲ್ಲಾ ಕಲಾವಿದರಿಗೆ ಮಾದರಿಯಾಗಿದೆ. ಕಲ್ಯಾಣ ಕರ್ನಾಟಕ ರಂಗಭೂಮಿ ಕ್ಷೇತ್ರದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪಸರಿಸಲು ಶ್ರಮಿಸಿದ್ದಾರೆ. ಅವರ ಅಗಲಿಕೆ ನಮ್ಮ ಭಾಗ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಗರ ಜಿ.ಬಂಗರಗಿ, ಅಮರ ಜಿ.ಬಂಗರಗಿ, ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಎಸ್.ಎಸ್.ಪಾಟೀಲ ಬಡದಾಳ, ನಾಗೇಂದ್ರಪ್ಪ ಕಲಶೆಟ್ಟಿ, ಅಶೋಕ ಜಾಧವ, ವಿಜಯ ಪಾಟೀಲ ಸೇರಿದಂತೆ ಮತ್ತಿತರರಿದ್ದರು.