
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 17 :- ರಂಗಭೂಮಿಯ ತವರೂರಾದ ಕೂಡ್ಲಿಗಿಯಲ್ಲಿ ಹಿರಿಯ ಕಲಾವಿದೆ ಬಿ.ಶಿವಕುಮಾರಿ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ಕಲಾವಿದರು ಸೇರಿ ಎಲ್ಲರಿಗೂ ಬರಸಿಡಿಲಿನಂತಾಗಿದೆ. ಹಿರಿಯ ಕಲಾವಿದೆಯನ್ನು ಕಳೆದುಕೊಂಡ ರಂಗಭೂಮಿ ಕ್ಷೇತ್ರ ಬಡವಾದಂತಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿರುವ ಕಲಾವಿದೆ ಬಿ.ಶಿವಕುಮಾರಿ ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಕಲಾವಿದೆಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಗುರುತಿಸಿದ್ದ ಸರಕಾರವು ಬಿ.ಶಿವಕುಮಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದ ಅವರಲ್ಲಿರುವ ಕಲಾ ಸಿರಿವಂತಿಕೆಗೆ ಸಾಕ್ಷಿಯಾಗಿತ್ತು. ಅಂಥ ಅದ್ಭುತ ಕಲಾವಿದೆಯನ್ನು ಕಳೆದುಕೊಂಡಿರುವುದು ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾದಂತಾಗಿದೆ ಎಂದು ತಿಳಿಸಿದರಲ್ಲದೆ, ಕೂಡ್ಲಿಗಿ ತಾಲೂಕಿನಲ್ಲಿರುವ ನಾಟಕ ಕಲಾವಿದೆಯರ ಬದುಕು ಸಂಕಷ್ಟದಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಎರಡ್ಮೂರು ವರ್ಷಗಳ ಕಾಲ ನಾಟಕಗಳ ಪ್ರದರ್ಶನವಿಲ್ಲದೆ ಕಲಾವಿದೆಯರು ಜೀವನ ನಡೆಸುವುದು ದುಸ್ತರವಾಗಿತ್ತು. ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ನಾಟಕ ಪ್ರದರ್ಶನಗಳು ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಆದರೂ, ಕಲಾವಿದರಿಗೆ ಹೆಚ್ಚಿನ ನೆರವಾಗುವಂತೆ ಯೋಜನೆ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿಯವರ ಬಳಿ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಕೆಪಿಸಿಸಿ ಮಹಿಳಾ ಘಟಕದ ಸದಸ್ಯೆ ನಾಗಮಣಿ ಜಿಂಕಲ್, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಸುರೇಶ್, ಮುಖಂಡರಾದ ಡಾಣಿ ರಾಘವೇಂದ್ರ, ಬಾಣದ ಶಿವಶಂಕರ, ಬಾಣದ ಶಿವಮೂರ್ತಿ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಕೆ.ಎನ್.ದಿನಕರ ಸೇರಿ ಇತರರಿದ್ದರು.