ರಂಗಕಲಾವಿದ ಲೀಲಾಧರ ದಂಪತಿ ನೇಣಿಗೆ ಶರಣು

ಉಡುಪಿ,ಡಿ.೧೩-ಕಾಪು- ಉಡುಪಿ ಪ್ರಾಂತ್ಯದಲ್ಲಿ ಸಮಾಜ ಸೇವಕರಾಗಿ, ರಂಗಕಲಾವಿದರಾಗಿ, ಜನಾನುರಾಗಿಯಾಗಿ ಖ್ಯಾತಿ ಗಳಿಸಿದ್ದ ಕಾಪು ಲೀಲಾಧರ ಶೆಟ್ಟಿ ದಂಪತಿಯು ಒಂದೇ ಸೀರೆಯಲ್ಲಿ ಇಬ್ಬರು ಜೊತೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ತಡರಾತ್ರಿ ನಡೆದಿದೆ.
ಲೀಲಾಧರ ಶೆಟ್ಟಿ (೬೮) ಮತ್ತು ವಸುಂಧರಾ ಶೆಟ್ಟಿ(೫೮) ದಂಪತಿಯು ಮಧ್ಯರಾತ್ರಿ ೧೧.೨೦ ರಿಂದ ೧೨.೩೦ ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಆತ್ಮಹತ್ಯೆಗೂ ಮುನ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು,ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ,ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕಾಪು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಲೀಲಾಧರ ಶೆಟ್ಟಿಯವರು ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳಾಗಿದ್ದರಲ್ಲದೆ, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಲೀಲಾಧರ ಶೆಟ್ಟಿ ರಂಗ ಕಲಾವಿದ, ಸಂಘಟಕ ಹಾಗೂ ಹಾಗೂ ಕಲಾಪೋಷಕರಾಗಿದ್ದರು. ಕಾಪು ರಂಗತರಂಗ ನಾಟಕ ತಂಡವನ್ನು ಕಟ್ಟಿ ನಾಟಕ ಕಲೆಯನ್ನು ಪ್ರಸಾರಗೊಳಿಸಲು ಅಪರಿಮಿತವಾಗಿ ಶ್ರಮಿಸಿದ್ದರು. ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವ ಪಡೆದಿದ್ದರು. ಸಾವಿರಾರು ಮಂದಿಗೆ ಶಿಕ್ಷಣ, ಉದ್ಯೋಗ ದೊರೆಯಲು ಕಾರಣರಾಗಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅತ್ಯಾಪ್ತರಾಗಿದ್ದ ಲೀಲಾಧರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೂ ಚುನಾವಣೆಗೆ ಸ್ಪರ್ಧಿಸಿದ್ದರು. ಬಹಳಷ್ಟು ರಾಜಕೀಯ ಮತ್ತು ಸಾಮಾಜಿಕ ನಾಯಕರಿಗೆ ಮಾರ್ಗದರ್ಶಕರಾಗಿದ್ದ ಅವರು ಮಜೂರು ನಾಗರಿಕ ಸಮಿತಿ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗ್ರಾ. ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಆಸುಪಾಸಿನ ಹಲವಾರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಮುಂಚೂಣಿಯಲ್ಲಿದ್ದರು. ಪ್ರಸ್ತುತ ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಸಂಜೆ ೪ ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಲೀಲಾಧರ ಶೆಟ್ಟಿ ಅವರ ಅಕಾಲಿಕ ಮರಣ ಕಾಪುವಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.