ರಂಗಕಲಾವಿದರಿಗೆ ಸಿಜಿಕೆ ಪ್ರೇರಣೆ: ಚನ್ನೂರ್

ಕಲಬುರಗಿ : ಜೂ.28: ದೇಶದಲ್ಲಿ ಸಮುದಾಯ ರಂಗತಂಡದ ಪ್ರಯೋಗಶೀಲತೆಗೆ ಸಿಜಿಕೆ ಅವರು ಒತ್ತು ನೀಡಿದ್ದಾರೆ. ಪ್ರಗತಿಪರ ಚಿಂತನೆ ಮತ್ತು ಮೌಲ್ಯಗಳನ್ನು ಹೋರಾಟದ ಮೂಲಕ ಕಟ್ಟ ಕಡೆಯ ವ್ಯಕ್ತಿಗೆ ಪ್ರಜ್ಞೆ ಮೂಡಿಸಿದ ದೈತ್ಯಶಕ್ತಿ ಸಿಜಿಕೆ ಅವರಗಿದ್ದಾರೆ. ಅವರ ಹೋರಾಟದ ಶಕ್ತಿ ಯುವ ರಂಗ ಕಲಾವಿದರಿಗೆ ಪ್ರೇರಣಾದಾಯಕ ಎಂದು ಕಲಬುರಗಿ ವಿಭಾಗದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಕೆ. ಎಚ್. ಚನೂರ ಹೇಳಿದರು.
ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದಲ್ಲಿ ರಂಗಾಯಣದಲ್ಲಿ ಆಯೋಜಿಸಿದ ‘ಸಿಜಿಕೆ ಬೀದಿರಂಗ ದಿನ, ಪುರಸ್ಕಾರ ಮತ್ತು ನಾಟಕ ಪ್ರದರ್ಶನ’ ಸಮಾರಂಭದಲ್ಲಿ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ ಕಲಬುರಗಿ ಆವೃತ್ತಿಯ ಹಿರಿಯ ಉಪ ಸಂಪಾದಕ ಸಂಗಮನಾಥ ರೇವತಗಾಂವ ಮುಖ್ಯ ಅತಿಥಿಯಾಗಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಪ್ರತಿಭೆಗೆ ಹೆಚ್ಚು ಪೆÇ್ರೀತ್ಸಾಹ ನೀಡುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲಾ ರಂಗ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು. ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಡಾ. ಪಿ. ಪರಶುರಾಮ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಸಿಜಿಕೆ ಅವರ ಸ್ಮಾರಣಾರ್ಥ ಬೀದಿ ರಂಗ ದಿನವನ್ನು ಆಚರಿಸಲಾಗುತ್ತಿದೆ. ಅವರ ಇಡೀ ಬದುಕು ರಂಗಭೂಮಿ ಕೆಲಸಕ್ಕೆ ನೀಡಿದವರು. ಕಲಾವಿದರ ತಂಡವನ್ನು ಕ್ರಿಯಾಶೀಲತೆ ಕಡೆಗೆ ಮುನ್ನಡಿಸಿದವರು. ಅವರ ಆದರ್ಶ ಮೌಲ್ಯಯುತ ಚಿಂತನೆ ರಂಗಾಶಕ್ತರಿಗೆ ಸ್ಫೂರ್ತಿ ಆಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಾಧಕ ರಂಗ ಕಲಾವಿದ ಪ್ರಭುಲಿಂಗ ಎನ್ ಕಿಣಗಿ ಅವರಿಗೆ 2022ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ ಮತ್ತು ರಂಗ ಕಲಾವಿದ ಡಾ. ಸಂದೀಪ ಬಿ. ಮಾಳಗಿ ಅವರಿಗೆ 2023ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿಜಿಕೆ ಪ್ರಶಸ್ತಿ ಪುರಸ್ಕೃತರ ಕುರಿತು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ. ಆರ್. ವೆಂಕಟರಾಜು ಮಾತನಾಡಿ ಪ್ರಶಸ್ತಿ ಪುರಸ್ಕೃತರನ್ನು ಸಾಧನೆಗಳನ್ನು ಪರಿಚಯಿಸಿ, ಸಿಜಿಕೆ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಹೆಮ್ಮೆ ವಿಷಯ. 70- 80 ರ ದಶಕದಲ್ಲಿ ಸಿಜಿಕೆ ಅವರ ಹೋರಾಟ ನಿರ್ಲಕ್ಷಿತ ಜನರ ಪರ ಧ್ವನಿಯಾಗಿತ್ತು. ಜಂಗಮ ಸ್ವರೂಪಿ ಸಿಜಿಕೆ ಅವರ ನಂತರ ಹೋರಾಟದ ದಿಕ್ಕು ರಾಜಕೀಯ ಲಾಭಕ್ಕಾಗಿ ಮಾತ್ರ ಸೀಮಿತ ಆಗಿದೆ. ಕೃತಿ ಮತ್ತು ಕ್ರಿಯೆ ಮೂಲಕ ರಂಗ ಪ್ರಯೋಗಶೀಲತೆಗೆ ದುಡಿದವರು ಸಿಜಿಕೆ. ಯುವಕರಲ್ಲಿ ಆತ್ಮವಿಶ್ವಾಸ, ಸಮಾಜ ಮುಖಿ ಆಲೋಚನೆಗಳನ್ನು ಬೆಳೆಸಿ ಆಧುನಿಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ನಯನಾ ಬಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಣ್ಯರನ್ನು ಸ್ವಾಗತಿಸಿದರು. ರಂಗಾಯಣ ಉಪ ನಿರ್ದೇಶಕಿ ಶ್ರೀಮತಿ ಜಗದೀಶ್ವರಿ ಅ ನಾಶಿ ಉಪಸ್ಥಿತರಿದ್ದರು. ಸ್ನೇಹ ಪ್ರಾರ್ಥಿಸಿದರು.
ಕೊನೆಯಲ್ಲಿ ಡಾ. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಅರವಿಂದ ಕುಲಕರ್ಣಿ ಅವರ ನಿರ್ದೇಶನದ ಹಾಗೂ ಸಿದ್ದಾರ್ಥ ಚಿಮ್ಮಾ ಇದ್ಲಾಯಿ ಅವರು ಸಂಗೀತ ಸಂಯೋಜಿಸಿದರು. ‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕ ಪ್ರದರ್ಶಿಸಲಾಯಿತು.