ರಂಗಕರ್ಮಿ ಪಿ.ಅಬ್ದುಲ್ಲಾಗೆ ಬಿ.ವಿ.ಕಾರಂತ ಪ್ರಶಸ್ತಿ


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.26: ಸ್ಥಳೀಯ ಭಾವೈಕ್ಯತಾ ವೇದಿಕೆಯ ಸಿದ್ಧಲಿಂಗಪ್ಪ ಚೌಕಿಯ ಹಿರಿಯ  ರಂಗಕರ್ಮಿ ಪಿ‌.ಅಬ್ದುಲ್ಲಾಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಸಕ್ತ ಸಾಲಿನ ಬಿ‌.ವಿ.ಕಾರಂತ ರಂಗಪ್ರಶಸ್ತಿ ಘೋಷಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2020-21 ಹಾಗೂ 2021-22ನೇ ವಿವಿಧ ಪ್ರಶಸ್ತಿ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದ್ದು, 2021-22ನೇ ಸಾಲಿನ ಬಿ.ವಿ‌.ಕಾರಂತ ಪ್ರಶಸ್ತಿಯನ್ನು ರಂಗಭೂಮಿಯಲ್ಲಿ  ಸಲ್ಲಿಸಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ಪಿ.ಅಬ್ದುಲ್ಲಾ ಅವರಿಗೆ ಘೋಷಿಸಲಾಗಿದೆ.  ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿಯೂ ಫಲಕ, ಪ್ರಮಾಣ ಪತ್ರ ಹಾಗೂ 5 ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ.
ರಂಗಭೂಮಿಯಲ್ಲಿ ಕಳೆದ 42 ವರ್ಷಗಳಿಂದ ಸಕ್ರಿಯರಾಗಿರುವ ಪಿ.ಅಬ್ದುಲ್ಲಾ ಅವರು ಬೀದಿ ನಾಟಕದ ಅಬ್ದುಲ್ ಸಾಬ್ ಎಂದೇ ಚಿರಪರಿಚಿತರು. ಹೊಸಪೇಟೆಯ ಸಿದ್ಧಲಿಂಗಪ್ಪ ಚೌಕಿಯಲ್ಲಿ ಭಾವೈಕ್ಯತಾ ವೇದಿಕೆಯನ್ನು ಸ್ಥಾಪಿಸಿ ಈ ಭಾಗದ ಕೊಳಗೇರಿ ನಿವಾಸಿ ಮಕ್ಕಳಿಗೆ ರಂಗತರಬೇತಿ ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ತಮ್ಮ ಸ್ವಸ್ಥಾನದಲ್ಲೇ ಸಂತ ಶಿಶುನಾಳ ಶರೀಫ ರಂಗಮಂದಿರ ಸ್ಥಾಪಿಸಿ ಮಕ್ಕಳಿಗೆ ಬೇಸಿಗೆ ಶಿಬಿರ, ನಾಟಕ, ಯುವಕರಿಗೆ ರಂಗತರಬೇತಿಯನ್ನು ನೀಡುತ್ತಾ ಬಂದಿದ್ದಾರೆ‌.
42 ವರ್ಷಗಳಿಂದ ರಂಗಭೂಮಿ ಸೇವೆ ಹಾಗೂ ರಂಗ ಚಟುವಟಿಕೆಗಳನ್ನು ಪರಿಗಣಿಸಿ ಹಲವು ಅಕಾಡೆಮಿ ಮತ್ತು ಸಂಘಸಂಸ್ಥೆಗಳನ್ನು ಅಬ್ದುಲ್ಲಾ ಅವರನ್ನು ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ. ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿರುವ ಅಪರೂಪದ ರಂಗಕರ್ಮಿ ಅಬ್ದುಲ್ಲಾ ಶಾಲಾ ದಿನಗಳಲ್ಲಿ ಸಾಹಿತ್ಯ ಅಕಾಡೆಮಿ, ರಂಗಭೂಮಿ ಮತ್ತು ಛಾಯಾಗ್ರಹಣದಲ್ಲಿ ಆಸ್ತಿಯನ್ನು ಹೊಂದಿ ಅದನ್ನು ಮುಂದುವರೆಸಿಕೊಂಡು ಬಂದರು.
1981ರಲ್ಲಿ ರಂಗಭೂಮಿಯನ್ನು ಪ್ರವೇಶಿಸಿದ ಇವರನ್ನು ಜನ ಪ್ರೀತಿಯಿಂದ ಬೀದಿ ನಾಟಕ ಸಾರ್ವಭೌಮ ಎಂದೇ ಗುರುತಿಸುತ್ತಾರೆ. ಭಾವೈಕ್ಯತಾ ವೇದಿಕೆ ಮುಖಾಂತರ ರಾಜ್ಯದ ಜೊತೆ ನೆರೆ ರಾಜ್ಯಗಳಲ್ಲೂ ಬೀದಿ ನಾಟಕ ಪ್ರದರ್ಶಿಸಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ-2006, ರಂಗಚೇತನ ಸಂಸ್ಕೃತಿ ಕೇಂದ್ರದ ಸಿಜಿಕೆ ರಾಜ್ಯ ಪ್ರಶಸ್ತಿ, ರಂಗಾಯಣದ ನವರಾತ್ರಿ ರಂಗೋತ್ಸವ-2016ರಲ್ಲಿ ರಂಗ ಸಾಧಕರಿಗೆ ಸನ್ಮಾನ, 2015ರಲ್ಲಿ ರಂಗಜಂಗಮ ಪುರಸ್ಕಾರ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಲಭಿಸಿವೆ.
ರಂಗ ಸಂಗೀತ ಹಾಗೂ ರಂಗಭೂಮಿಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿರು ಬಿ.ವಿ.ಕಾರಂತರು ರಂಗಭೂಮಿಯನ್ನು ಬೆಳೆಸಿ ಅದರ ಜೊತೆಗೆ ಕಲಾವಿದರಿಗೂ ವೇದಿಕೆ ಒದಗಿಸಿದ್ದಾರೆ,  ಅವರ ಹೆಸರಲ್ಲಿ ನನಗೆ ಪ್ರಶಸ್ತಿ ಘೋಷಿಸಿದ್ದು, ಸಂತಸ ತಂದಿದೆ.
ರಂಗ ಭೂಮಿಯಲ್ಲಿ ರಂಗಸಂಘಟನೆ ಸಹ ಒಂದು ಕಲೆಯಾಗಿದೆ, ಹೊಸಪೇಟೆ ಭಾಗದ ಸಿದ್ಧಲಿಂಗಪ್ಪ ಚೌಕಿ ಸೇರಿದಂತೆ ವಿವಿಧೆಡೆಯ ಕೊಳಗೇರಿ ಮಕ್ಕಳನ್ನು ರಂಗ ಸಂಘಟನೆಯಲ್ಲಿ ತೊಡಗಿಸಿದ್ದರು ವಿಶೇಷವೆನಿಸಿದೆ.
ರಂಗಭೂಮಿ ಸೇವೆ ಪರಿಗಣಿಸಿ ನನಗೆ ಘೋಷಿಸಿದೆ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ, ಸೇವೆ ಹೆಚ್ಚಿಸುವಂತೆ ಮಾಡಿದೆ. ಭಾವೈಕ್ಯತಾ ವೇದಿಕೆ ಮೂಲಕ 42 ವರ್ಷಗಳಿಂದ ಬೀದಿ ನಾಟಕ , ಮಕ್ಕಳ ನಾಟಕ, ಯುವ ನಾಟಕ ಆಯೋಜಿಸುತ್ತಾ ಬಂದಿದ್ದೇನೆ. 
ನನಗಿರುವ ಅಲ್ಪ ಸ್ಥಳದಲ್ಲೇ ಸಣ್ಣ ರಂಗಮಂದಿರ ನಿರ್ಮಿಸಿ ಭಾವೈಕ್ಯತಾ ವೇದಿಕೆ ಮೂಲಕ ಉಚಿತವಾಗಿ ಬೇಸಿಗೆ, ರಂಗಭೂಮಿ ತರಬೇತಿ ನೀಡುತ್ತಿದ್ದೇವೆ. ಸರ್ಕಾರದ ಪ್ರಶಸ್ತಿಯ ಹಣದಿಂದ ರಂಗಮಂದಿರದ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಪಿ‌. ಅಬ್ದುಲ್ಲಾ.