ರಂಗಕರ್ಮಿ ಕೃಷ್ಣಪ್ಪ ಬಂಬಿಲಗೆ ರಂಗ ಗೌರವ

ಪುತ್ತೂರು, ಎ.೧೪- ಬೆಂಗಳೂರಿನ ಮಾಲೂರು ರಂಗ ವಿಜಯ ತಂಡದಿಂದ ಕೊಡಮಾಡಲ್ಪಡುವ ರಂಗ ಗೌರವಕ್ಕೆ ರಂಗಕರ್ಮಿ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಕೃಷ್ಣಪ್ಪ ಬಂಬಿಲ ಅವರಿಗೆ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗೌರವ ಪ್ರಧಾನ ಮಾಡಲಾಯಿತು.

ರಂಗ ವಿಜಯ ತಂಡದ ನಾಟಕೋತ್ಸವ-೨೦೨೧ರ ೪ನೇ ವರ್ಷದ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಬಂಬಿಲ ಅವರಿಗೆ ಗೌರವ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಂಗಭೂಮಿ ನಿರ್ದೇಶಕ, ನಟ, ಕಿರುತೆರೆ ಮತ್ತು ಹಿರಿತೆರೆ ನಟ ಮಂಡ್ಯ ರಮೇಶ್ ಸೇರಿದಂತೆ ರಂಗ ನಿರ್ದೇಶಕರಾದ ಬಿ.ವಿ. ರಾಜಾರಾಂ, ಡಾ. ಎನ್. ಎಸ್. ಶಂಕರ್, ನಾಟಕಗಾರ ಕೆ.ವೈ. ನಾರಾಯಣ ಸ್ವಾಮಿ, ರಂಗವಿಜಯ ಮುಖ್ಯಸ್ಥೆ ಮಾಲೂರು ವಿಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ನರೇಂದ್ರ ಬಾಬು, ಚೆನ್ನಬಸಪ್ಪ, ಗುಣಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ೧೮ ವರ್ಷಗಳಿಂದ ರಂಗಭೂಮಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕೃಷ್ಣಪ್ಪ ಬಂಬಿಲ ಅವರು ಮುಖ್ಯವಾಗಿ ಮಕ್ಕಳ ರಂಗಭೂಮಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಬುದ್ಧನೆಡೆಗೆ, ಕಲ್ಕುಡ ಕಲ್ಲುರ್ಟಿ, ಕೋಟಿ ಚೆನ್ನಯ, ಕನಸು, ಬಾರದಿರಲಿ ನೋವು, ಮರೀಚಿಕೆ, ಚೋರಚರಣದಾಸ, ಬಿಂಬ, ವೀರಮಾತೆ, ಕೊಳ್ಳಿ ಹೀಗೆ ಇನ್ನೂ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಈ ಪೈಕಿ ಹಲವು ನಾಟಕಗಳಿಗೆ ಪ್ರಶಸ್ತಿ ಲಭಿಸಿದೆ. ಅಲ್ಲದೆ  ಹಲವಾರು ಜಾಗೃತಿ ಬೀದಿ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಆದಿವಾಸಿ ಬುಡಕಟ್ಟು ಮಕ್ಕಳಿಗೆ, ಸ್ಥಳೀಯ ಯುವಕರಿಗೆ ಹಲವಾರು ರಂಗ ತೆಬೇತಿಯನ್ನು ನೀಡಿರುವ ಕೃಷ್ಣಪ್ಪ ಅವರು ಡಾ, ಶಿವರಾಮ ಕಾರಂತರ ಬಾಲವನದಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಡಾ. ಸುಕುಮಾರ ಗೌಡರ ಮಕ್ಕಳ ಮಂಟಪದಲ್ಲಿ ಮಕ್ಕಳಿಗೆ ರಂಗ ತರಬೇತಿಯನ್ನು ನೀಡುತ್ತಿದ್ದಾರೆ.