ಯೋಧರ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಸಹಕಾರ : ಜ್ಯೋತಿಗಣೇಶ್

ತುಮಕೂರು, ಜು. ೨೮- ದೇಶದ ರಕ್ಷಣೆಗಾಗಿ ತ್ಯಾಗ ಬಲಿದಾನಗೈದ ಹುತಾತ್ಮ ಸೈನಿಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದ ಅಮಾನಿಕೆರೆ ಆವರಣದ ಧ್ವಜಸ್ತಂಭದ ಬಳಿ ನಡೆದ ‘ಕಾರ್ಗಿಲ್ ವಿಜಯೋತ್ಸವ ಹಾಗೂ ವೀರಯೋಧರ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಮಕೂರಿನಲ್ಲಿ ಯೋಧರ ಸ್ಮಾರಕ ನಿರ್ಮಾಣಕ್ಕಾಗಿ ಜಾಗವನ್ನು ಅಮಾನಿಕೆರೆ ಆವರಣದಲ್ಲಿ ಗುರುತಿಸಿದ್ದು ಅಲ್ಲಿ ಸೈನಿಕರಿಗೆ ಸಂಬಂಧಿಸಿದ ಸ್ಮಾರಕವನ್ನು ನಿರ್ಮಿಸಲು ಅಗತ್ಯವಾದ ಸಹಕಾರ ನೀಡಲಾಗುವುದು ಎಂದರು.
ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಡಾ. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವದ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿ ಸ್ಥಾನಕ್ಕೆ ಬಂದಾಗ ಅದನ್ನು ಸಹಿಸದೆ ಭಾರತದ ಗಡಿಯಲ್ಲಿ ಬಹಳ ಅಮಾನವೀಯವಾಗಿ ವರ್ತಿಸಿ ಭಾರತದ ಸೈನಿಕರ ಮೇಲೆ ದಾಳಿ ನಡೆಸಲಾಯಿತು. ೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿತು. ಆದರೆ ಭಾರತದ ಅನೇಕ ಯೋಧರು ದೇಶದ ರಕ್ಷಣೆಗಾಗಿ ಹೋರಾಡಿ ಹುತಾತ್ಮರಾದರು. ಅಂದು ಹುತಾತ್ಮರಾದ ಯೋಧರು ಇಂದು ಕೋಟ್ಯಂತರ ಹೃದಯಗಳಲ್ಲಿ ಜಾಗೃತರಾಗಿದ್ದಾರೆ ಎಂದರು.
ಭಾರತ ಇಂದು ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಅತ್ಯುತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ದೇಶವಾಗಿದೆ. ಭಾರತದ ಬದುಕು ಪ್ರಪಂಚದ ಬದುಕಾಗಿದೆ. ಇಡೀ ಜಗತ್ತಿಗೆ ಭಾರತ ಬೇಕಾಗಿದೆ. ಸನಾತನ ಭಾರತೀಯ ಪರಂಪರೆಯ ರಕ್ಷಣೆಯೊಂದಿಗೆ ಭಾರತ ಅಗ್ರಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಶಿವಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಸೇರಿದಂತೆ ಎನ್.ಸಿ.ಸಿ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.