
ನವದೆಹಲಿ,ನ.೧೨- ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಚೀನಾ ಗಡಿಗೆ ಹೊಂದಿಕೊಂಡಿರುವ ಹಿಮಾಚಲ ಪ್ರದೇಶ ಲೆಪ್ಚಾದಲ್ಲಿಂದು ಬೆಳಗ್ಗೆ ಪ್ರಧಾನಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಸೈನಿಕರಲ್ಲಿ ಹೊಸ ಹುರುಪು ತುಂಬಿದರು.
ಹಿಮಾಚಲ ಪ್ರದೇಶದ ದೂರದ ಗ್ರಾಮ ಲೆಪ್ಚಾ ತಲುಪಿದ ಪ್ರಧಾನಿ ಮೋದಿ, ವೀರ ಭದ್ರತಾ ಪಡೆಯೊಂದಿಗೆ ದೀಪಾವಳಿ ಆಚರಿಸಿದ್ದು ಖುಷಿ ತಂದಿದೆ ಎಂದಿದ್ದಾರೆ.
ಕಳೆದ ವರ್ಷ ಕಾರ್ಗಿಲ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಈ ಬಾರಿ ಲೆಪ್ಚಾದಲ್ಲಿ ದೀಪಾವಳಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ನಂತರ ಹಲವು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಅದರಲ್ಲಿಯೂ ಜಮ್ಮು ಕಾಶ್ಮೀರದ ವಿವಿಧ ಭಾಗಗಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.
ಇದೇ ವೇಳೆ ದೇಶದ ಜನರಿಗೆ ಒಳ್ಳೆಯ ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಒಳ್ಳೆಯ ಆರೋಗ್ಯವನ್ನು ತರಲಿ ಎಂದು ಟ್ವೀಟ್ ಮಾಡುವ ಮೂಲಕ ಜನತೆಗೆ ದೀಪಾವಳಿಯ ಸಂದೇಶವನ್ನು ನೀಡಿದ್ದಾರೆ.
ಬಿಗಿ ಭದ್ರೆತೆ
ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಗ್ರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಹಿನ್ನೆಲೆಯಲ್ಲಿ ವ್ಯಾಪಕ ಬಿಗಿ ಭದ್ರೆತ ಒದಗಿಸಲಾಗಿತ್ತು.