ಯೋಧರೊಂದಿಗೆ ಪಂಡಿತಾರಾಧ್ಯ ಶ್ರೀಗಳ ಸಂವಾದ

ಸಾಣೇಹಳ್ಳಿ, ಮೇ 16; ಇಲ್ಲಿನ ಶ್ರೀಮಠದ ಶ್ರೀ ಶಿವಕುಮಾರ ಬಯಲು ರಂಗಮAದಿರದಲ್ಲಿ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಭಾರತೀಯ ಸೇನೆಯ ಯೋಧರ ಜೊತೆ ಒಂದಿಷ್ಟು ಹೊತ್ತು ಸಂವಾದ ನಡೆಸಿದರು. ಚುನಾವಣಾ ಕಾರ್ಯಕ್ಕೆ ಕರ್ತವ್ಯದ ಮೇಲೆ ಬಂದಿದ್ದ ಭಾರತೀಯ ಸೇನೆ (ಸಿಆರ್‌ಫಿಎಫ್‌ನ ಡಿ/134 ತುಕಡಿಯ 60 ಜನರ ತಂಡ) ನೆಯ ತಂಡ ಕಳೆದ ಒಂದು ತಿಂಗಳಿಂದ ಶ್ರೀಮಠದ ಪಕ್ಕದಲ್ಲೇ ಇರುವ ವಸತಿ ನಿಲಯದಲ್ಲಿ ಬೀಡು ಬಿಟ್ಟಿತ್ತು. ದಿನವೂ ಬೆಳಗ್ಗೆ ತೋಟಕ್ಕೆ ಹೋಗುವಾಗ ಅಲ್ಲಿಂದಲೇ ಪೂಜ್ಯರು ಹಾದು ಹೋಗುತ್ತಿದ್ದರು. ಆಗೆಲ್ಲ ವ್ಯಾಯಾಮ ನಿರತರಾಗಿದ್ದ ಸೈನಿಕರು ಪೂಜ್ಯರಿಗೆ ಅಲ್ಲಿಂದಲೇ ಕೈಮುಗಿದು ನಮಸ್ಕರಿಸುತ್ತಿದ್ದರು. ಪೂಜ್ಯರೂ ದೂರದಿಂದಲೇ ಆಶೀರ್ವದಿಸುತ್ತಿದ್ದರು. ಆದರೆ ಅವರಿಗೆ ಪೂಜ್ಯರ ಬಗ್ಗೆ, ಮಠದ ಬಗ್ಗೆ, ಮಠದ ಚಟುವಟಿಕೆಗಳ ಬಗ್ಗೆ ತಿಳಿದು ಕೊಳ್ಳುವ ಹಂಬಲವಿತ್ತು. ಆದರೆ ಅವರಲ್ಲಿನ ಕೆಲವರು ಕರ್ತವ್ಯದ ಮೇಲೆ ಬೇರೆ ಬೇರೆ ಕಡೆ ಹೋಗಿರುತ್ತಿದ್ದರಿಂದ ಎಲ್ಲರೂ ಒಟ್ಟಿಗೆ ಸೇರುವ ಸಮಯಾವಕಾಶವಾಗಿರಲಿಲ್ಲ. ರಾಜ್ಯದ ಚುನಾವಣೆಗಳ ಜೊತೆಗೆ ಅವರ ಕರ್ತವ್ಯಗಳೂ ಮುಗಿದು ಅವರು ತಮ್ಮ ತಮ್ಮ ಮೂಲ ಸ್ಥಾನಗಳಿಗೆ ಒಂದೆರಡು ದಿನಗಳಲ್ಲಿ ಹಿಂದಿರುಗಬೇಕಾದ ಅನಿವಾರ್ಯತೆ ಉಂಟಾಗಿತ್ತು. ಅವರ ಬಯಕೆಯನ್ನು ಈಡೇರಿಸುವ ಸಲುವಾಗಿ ಇಂದು ಸಂಜೆ ಅವರಿಗೆಲ್ಲ ಶ್ರೀಮಠದಲ್ಲಿ ಔತಣವನ್ನಿಟ್ಟುಕೊಳ್ಳಲಾಗಿತ್ತು. ಔತಣಕ್ಕಿಂತ ಮುಂಚೆ ಬಯಲು ರಂಗಮAದಿರದಲ್ಲಿ ಕುಳಿತು ಒಂದಿಷ್ಟು ಹೊತ್ತು ಸೈನ್ಯ, ಧರ್ಮ, ಬಸವಾದಿ ಶಿವಶರಣರು, ಅವರು ರಚಿಸಿದ ವಚನಗಳು, ರಾಜಕೀಯ, ಜನಜೀವನ, ಶಿಕ್ಷಣ, ಸಂಸ್ಕೃತಿ, ನಾಟಕ, ಸಾಹಿತ್ಯ, ಸಂಗೀತ, ಕರ್ನಾಟಕದ ವಾತಾವರಣ, ಜನರ ವರ್ತನೆ, ಆಲೋಚನೆ, ವಿಚಾರ-ನಿಲುವು ಮೊದಲಾದವುಗಳ ಕುರಿತು ಅನೌಪಚಾರಿಕವಾಗಿ ಪರಸ್ಪರ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ ಎಸ್ ದ್ಯಾಮೇಶ್ ಸ್ವಾಗತಿಸುವುದರ ಜೊತೆಗೆ ಅನುವಾದಕರಾಗಿ ಕೆಲಸ ಮಾಡಿದರು. ನಟರಾಜ್ ಹೊನ್ನವಳ್ಳಿ, ಬಿ ಎಸ್ ಶಿವಕುಮಾರ್, ಟಿ ಎಂ ಮರುಳಸಿದ್ದಯ್ಯ, ರಾಜು, ಮಧು, ಜೀವನ್ ಮೊದಲಾದವರು ಉಪಸ್ಥಿತರಿದ್ದರು. ವೈ ಡಿ ಬದಾಮಿ ವಂದಿಸಿದರು. ಹೆಚ್ ಎಸ್ ನಾಗರಾಜ್ ವಚನಗೀತೆಗಳನ್ನು ಹಾಡಿದರು. ಸೈನಿಕರಲ್ಲೊಬ್ಬರು ದೇಶಭಕ್ತಿಗೀತೆ ಹಾಡಿದರು. ಶ್ರೀಮಠದಿಂದ ಪೂಜ್ಯರು ಅವರಿಗೆ ಔತಣ ನೀಡುವ ಮೂಲಕ ದೇಶ ಕಾಯುವ ಸೈನಿಕರನ್ನು ಅಭಿನಂದಿಸುವುದರ ಜೊತೆಗೆ ಗೌರವಿಸಿ, ಆಶೀರ್ವದಿಸಲಾಯಿತು. ಪೂಜ್ಯರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವುದರ ಮೂಲಕ ಅನೌಪಚಾರಿಕ ಸಭೆ ಮುಕ್ತಾಯಗೊಂಡಿತು.