ಯೋಧರು ನಮ್ಮ ದೇಶದ ಸಂಪತ್ತು; ಡಾ.ರಾಮಚಂದ್ರ ಕಾರಟಗಿ

ಹುಬ್ಬಳ್ಳಿ. ಜ.೮; ವೃತ್ತಿ ಹಾಗೂ ಪ್ರವೃತ್ತಿ ಇವೆರಡರಲ್ಲೂ ಸಾಮಿಪ್ಯವಿದ್ದರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕಾರಟಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಾದ ಡಾ.ರಾಮಚಂದ್ರ ಕಾರಟಗಿ ಅಭಿಮತ ವ್ಯಕ್ತಪಡಿಸಿದರು.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೈನಿಕರ ಬಳಗದಿಂದ  ನಿವೃತ್ತ ಸೈನಿಕರಿಗೆ ಹಮ್ಮಿಕೊಂಡಿದ್ದ ಗೌರವಾಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು ವೃತ್ತಿಯಲ್ಲಿ ಸಾರ್ಥಕ ಭಾವನೆ ಇರಬೇಕು ಇದರಿಂದ ಗರಿಷ್ಟ ಪ್ರಮಾಣದಲ್ಲಿ ಉನ್ನತ ಪ್ರಮಾಣಕ್ಕೆ ಹೋಗಲು ಸಾಧ್ಯ. ದೇಶದ ಗಡಿಕಾಯುವ ಯೋಧರ ಪ್ರತಿ ನುಡಿಗಳು ನಮಗೆ ಸ್ಪೂರ್ತಿಯಾಗಬೇಕು.ಚಿಕ್ಕಂದಿನಿಂದಲೂ ನನ್ನ ತಾಯಿಯವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳುತ್ತಿದ್ದ ರೀತಿಗೆ ನಾನೂ ಸಹ ಸೈನಿಕನಾಗಬೇಕೆಂಬ ಕಿಚ್ಚು ಮೂಡಿತ್ತು. ಆದರೆ ಕಾಲಿನ ಶಸ್ತ್ರಚಿಕಿತ್ಸೆ ನನ್ನನ್ನು ಹತಾಶಗೊಳಿಸಿತ್ತು.ಅದಕ್ಕಾಗಿಯೇ ಯೋಧರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕಳೆದ 15 ವರ್ಷದಿಂದ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಬರುತ್ತಿದೆ ಇದರಿಂದ ದೇಶಸೇವೆ ಮಾಡುವ ಸೌಭಾಗ್ಯ ನನ್ನದಾಗಿದೆ ಎಂದರು.ಗಡಿಯಲ್ಲಿ  ನಿಸ್ವಾರ್ಥ ಸೇವೆ ಯೋಧರದು.ದಿನನಿತ್ಯ ದೇವರ ಜೊತೆಗೆ ಸೈನಿಕರನ್ನು ನೆನಪಿಸಿಕೊಳ್ಳುವ ಕಾಯಕ ಬೆಳೆಸಿಕೊಳ್ಳಬೇಕು ಆಗ ಸೈನಿಕರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ.ಕೇವಲ ಒಂದು ದಿನ ಯೋಧರನ್ನು ಗೌರವಿಸುವ ಕಾರ್ಯ ನಡೆದರೆ ಸಾಲದು ಪ್ರತಿನಿತ್ಯ ಗೌರವದಿಂದ ಕಾಣುವುದು ಮುಖ್ಯ. ನಮ್ಮ ಮಕ್ಕಳಿಗೆ ಅವರ ಶೌರ್ಯದ,ಶ್ರಮದ ಕಾಯಕದ ಬಗ್ಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಯೋಧರಿಗೆ ಸಮಾಜದೊಂದಿಗಿನ ಒಡನಾಟ ಇರುವುದಿಲ್ಲ ಆದ್ದರಿಂದ ನಿವೃತ್ತಿ ನಂತರ ಯೋಧರಿಗೆ ಗೌರವ ನೀಡಬೇಕು ಎಂದು ಕರೆ ನೀಡಿದರು.ಯೋಧರು ನಮ್ಮ ದೇಶದ ಬೆನ್ನೆಲುಬು ಮಾತ್ರವಲ್ಲ ನಮ್ಮ ಸಂಪತ್ತು ಎಂದರು. ಈ ವೇಳೆ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಶ್ರೀ ಮಲ್ಲಿಕಾರ್ಜುನ ದೇವರು ಸಾನಿಧ್ಯ ವಹಿಸಿದ್ದರು. ಬೆಂಗಳೂರಿನ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ.ಕೆ .ಶಿವಣ್ಣ,  ಡಾ.ವೀಣಾ ಕಾರಟಗಿ,ನಿವೃತ್ತ ಸೈನಿಕರಾದ ರವಿಕಿರಣ ಕಮಲಾಕರ,ಆನಂದ ಆರ್ವಾರೆ,ರವಿಪಾಟೀಲ್,ಅಜೀತ ನಾಗಪ್ಪ ವಾಳಕೆ,ಕಲಗೌಡಾ ಅಪ್ಪಣ್ಣಾ ನಾಗೌಡ ಇದ್ದರು.ಸಮಾರಂಭದಲ್ಲಿ ಸುಬೇದಾರ್ ಮೇಜರ್ ಹಾಗೂ ರಾಷ್ಟ್ರಪತಿಗಳ ಸೇನಾ ಮೆಡಲ್ ಪುರಸ್ಕೃತರಾದ ದಯಾನಂದ ಬಸಪ್ಪ ಢಾಳಿ, ಸಂಜಯ ಬಸಯ್ಯಾ ಪೂಜೇರಿ,ಸುನೀಲ್ ಬಾಬು ಹುದ್ದಾರ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.