ಯೋಧರಿಗೆ ಅಗತ್ಯ ಸಾಮಗ್ರಿ ಪೂರೈಕೆಗೆ ಆಪರೇಷನ್ ಹರ್ಕ್ಯುಲಸ್

ನವದೆಹಲಿ, ನ 16-ಗಡಿ ವಿವಾದ ಕುರಿತಂತೆ ಚೀನಾ ಜತೆಗಿನ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಚಳಿಗಾಲದಲ್ಲೂ ಮುಂದುವರಿಯುವ ಭೀತಿ ಎದುರಾಗಿದೆ.
ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆ ಬಳಿ ನಿಯೋಜನೆಗೊಂಡಿರುವ ಯೋಧರಿಗೆ ಸಾಮಗ್ರಿಗಳ ಪೂರೈಕೆಗಾಗಿ ಭಾರತ ಸೇನಾ ವಿಮಾನಗಳನ್ನು ನಿಯೋಜಿಸಿದೆ.
ಆಪರೇಷನ್ ಹರ್ಕ್ಯುಲಸ್ ಹೆಸರಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ವಾಯುಪಡೆಯ ಸಿ-17, ಐಎಲ್-76 ಹಾಗೂ ಎಎನ್-32 ಯುದ್ಧ ವಿಮಾನಗಳನ್ನು ಇಂದು ಕಾರ್ಯಾಚರಣೆಗೆ ನಿಯೋಜಿಸಲಾಯಿತು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಇಲಾಖೆ, ಯೋಧರಿಗೆ ಬೇಕಾದ ಆಹಾರ, ಉಡುಪುಗಳು, ಇಂಧನ ಸೇರಿದಂತೆ ಅಗತ್ಯ ವಸ್ತುಗಳನ್ನು ವಿಮಾನಗಳು ಸಾಗಾಣಿಕೆ ಮಾಡಲಿದೆ ಎಂದು ತಿಳಿಸಿದೆ.
ಅವಶ್ಯಕ ವಸ್ತುಗಳನ್ನು ಹೊತ್ತ ವಾಯುಪಡೆಯ ವಿಮಾನ ಮುಂಚೂಣಿ ನೆಲೆಯಿಂದ ಎಲ್ಎಸಿ ಕಡೆಗೆ ಪ್ರಯಾಣ ಬೆಳೆಸಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.