ಯೋಧನ ಕುಟುಂಬಕ್ಕೆ ನೀಡಿದ ಭರವಸೆ ಹುಸಿ

ವಿಜಯಪುರ, ಜು ೨೬- ೧೯೯೯ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಹುತ್ಮಾತ್ಮರಾದ ರಾಜ್ಯದ ಯೋಧನ ಕುಟುಂಬಕ್ಕೆ ಸರಕಾರ ನೀಡಿದ ಭರವಸೆ ಇನ್ನು ಮಾಡದೆ ಉಳಿಸಿಕೊಂಡಿದೆ.
ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದ ಬಿಎಸ್‌ಎಫ್ ಯೋಧ ದಾವಲಸಾಬ್ ಅಲ್ಲಿಸಾಬ್ ಕಂಬಾರ (ನದಾಫ್) ಹೆಸರು ಚಿರಸ್ಥಾಯಿಯಾಗಿದೆ. ಆದರೆ, ಈಡೇರಬೇಕಿದ್ದ ಆಶ್ವಾಸನೆಯೊಂದು ಹಾಗೆ ಉಳಿದುಕೊಂಡಿದ್ದ ಹಿನ್ನಲೆಯಲ್ಲಿ, ಯೋಧನ ಕುಟುಂಬ ಬೇಸರ ಹೊರಹಾಕಿದೆ.
ಮುದ್ದೇಬಿಹಾಳದ ಇಂದಿರಾ ನಗರದಲ್ಲಿ ವಾಸವಾಗಿದ್ದ ಅಲಿಸಾಬ್ ಅವರ ಹಿರಿಯ ಮಗನಾಗಿದ್ದ ದಾವಲಸಾಬ್ ೧೯೯೨ರಲ್ಲಿ ಸೈನ್ಯದಲ್ಲಿ ಸೇವೆಗೆ ಸೇರಿದ್ದರು. ಎಂಟು ವರ್ಷದ ಬಳಿಕ ಕಾರ್ಗಿಲ್‌ನಲ್ಲಿ ನಡೆದ ಕದನದಲ್ಲಿ ಶತ್ರುಪಡೆಯ ಮೂವರು ಸೈನಿಕರನ್ನು ಹೊಡೆದುರುಳಿಸಿ ಗುಂಡೇಟಿಗೆ ಬಲಿಯಾದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರು ಹುತಾತ್ಮ ಸೈನಿಕನ ಕುಟುಂಬದವರಲ್ಲಿ ಒಬ್ಬರಿಗೆ ರಾಜ್ಯ ಸರ್ಕಾರದಿಂದ ನೌಕರಿ ಕೊಡುವ ಭರವಸೆ ನೀಡಿ ಆದೇಶ ನೀಡಿದ್ದರು. ಹಾಗೆಯೇ ಪುರಸಭೆಯಿಂದ ನಿವೇಶನ ಕೊಡುವುದಾಗಿಯೂ ಹೇಳಿದ್ದರು.ಆದರೆ, ಭರವಸೆ ಈವರೆಗೂ ಈಡೇರಿಲ್ಲ ಅನ್ನೋದು ಯೋಧನ ಕುಟುಂಬಸ್ಥರ ನೋವಾಗಿದೆ. ಹುತಾತ್ಮರಾದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮತ್ತು ವಿವಿಧ ಸಂಘ-ಸಂಸ್ಥೆಗಳು ನೆರವಿಗೆ ನಿಲ್ಲುವ ಮೂಲಕ ಔದಾರ್ಯ ಮೆರೆದಿದ್ದಾರೆ.
ದಾವಲಸಾಬ್ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ೨.೫ ಲಕ್ಷ ರೂ., ಕೇಂದ್ರ ಸರ್ಕಾರದಿಂದ ೭.೫ ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬಕ್ಕೆ ೫ ಲಕ್ಷ ರೂ.ನೀಡಲಾಗಿದೆ.