ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕಾರ್ಯಾಗಾರ ಅಗತ್ಯ : ಜಿಲ್ಲಾಧಿಕಾರಿ

ಬಾಗಲಕೋಟೆ,ನ.20 : ಸಫಾಯಿ ಕರ್ಮಚಾರಿಗಳಿಗೆ ದೊರೆಯಬಹದಾದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಫಾಯಿ ಕರ್ಮಚಾರಿಗಳಿಗೆ ದೊರೆಬೇಕಾದ ಗೃಹಭಾಗ್ಯ, ಹೊರಗುತ್ತಿಗೆ ನೌಕರರ ಪಿಎಫ್ ಮತ್ತು ಇಎಸ್‍ಐ, ಆರೋಗ್ಯ ಭಾಗ್ಯ, ಶಿಕ್ಷಣ ಹಾಗೂ ಸೂರು ಒದಗಿಸುವುದು ಸೇರಿದಂತೆ ಇನ್ನು ಅನೇಕ ಸೌಲಭ್ಯಗಳ ದೊರೆಕಿಸಿಕೊಡುವ ನಿಟ್ಟಿನಲ್ಲಿ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕಾರ್ಯಗಾರವನ್ನು ಏರ್ಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸಫಾಯಿ ಕರ್ಮಚಾರಿಗಳ ಕುಟುಂಬಕ್ಕೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಆಯಾ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳು ವಿವಿಧ ಸೌಲಭ್ಯಗಳ ಬಗ್ಗೆ ಕರಪತ್ರಗಳನ್ನು ಹೊರಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಪದ್ದತಿ ನಿಷೇಧವಿದ್ದು, ಈ ಕುರಿತು ತೀವ್ರ ನಿಗಾ ಇಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದರು.
ಪೌರ ಕಾರ್ಮಿಕರಿಗೆ ಅಗತ್ಯ ಸುರಕ್ಷಿತ ಸಾಧನ ಸಲಕರಣೆಗಳನ್ನು ಪೂರೈಸಬೇಕು. ಪೌರಕಾರ್ಮಿಕರನ್ನು ಸಮರ್ಪಕವಾಗಿ ಗುರುತಿಸಿ ಸೌಲಭ್ಯ ಕಲ್ಪಿಸಬೇಕು. ಇಎಸ್‍ಐ, ಪಿಎಫ್ ಅವರ ಖಾತೆಗೆ ಜಮಾ ಆದ ಬಗ್ಗೆ ಪರಿಶೀಲನೆ ಮಾಡಬೇಕು. ನೂತನ ವೇತನ ಜಾರಿ, ಕಾಲಕಾಲಕ್ಕೆ ಪೌರಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮಾಡಿಸುವುದು, ವಸತಿ ಶಾಲೆಗಳಲ್ಲಿ ಸಪಾಯಿ ಕರ್ಮಚಾರಿ ಮಕ್ಕಳಿಗೆ ಪ್ರವೇಶಾತಿ ಹಾಗೂ ವಿದ್ಯಾರ್ಥಿವೇತನ ದೊರಕಿಸುವ ವ್ಯವಸ್ಥೆಯಾಗಬೇಕು ಎಂದರು.
ಪ್ರಧಾನ ಮಂತ್ರಿ ಆದರ್ಶಗ್ರಾಮ ಯೋಜನೆಯಡಿ 2018-19 ಹಾಗೂ 2019-20ನೇ ಸಾಲಿನಲ್ಲಿ ಆಯ್ಕೆಯಾದ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕ್ರೀಯಾಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಸಮಾಜ ಕಲ್ಯಾಣ ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರೀಯಾ ಯೋಜನೆಗಳನ್ನು ಪರಿಶೀಲಿಸಿ ಅನುಮೋದನೆ ಪಡೆದುಕೊಳ್ಳಲು ತಿಳಿಸಿದರು. ಆಯ್ಕೆಯಾದ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಗಳ ಪರಿಶೀಲನೆಗೆ ಅನಿರೀಕ್ಷಿತಗಾಗಿ ಭೇಟಿ ನೀಡಲಾಗುವುದೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಸಮಾಜ ಕಲ್ಯಾಣ ಇಲಖೆಯ ಉಪನಿರ್ದೇಶಕ ಮಹಾಂತೇಶ ಪೋತದಾರ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸೇರಿದಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.