ಯೋಜನೆ ಯಶಸ್ವಿಗೊಳಿಸುವತ್ತ ಅಧ್ಯತೆ ನೀಡಲು ಸೂಚನೆ

ಮೈಸೂರು:ಏ:02: ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ “ಜಲಶಕ್ತಿ ಅಭಿಯಾನ ಯೋಜನೆ”ಯನ್ನು ಯಶಸ್ವಿಗೊಳಿಸುವತ್ತ ಅಧಿಕಾರಿಗಳು ಆದ್ಯತೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಈ ಹೊಸ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಜಾರಿಗೆ ತಂದಿದ್ದು, ಇದರನ್ವಯ ಮುಂಗಾರು ಮಳೆ ಆರಂಭಗೊಂಡ ದಿನದಿಂದ ಮುಂದಿನ 100 ದಿನಗಳ ಕಾಲ ಬೀಳುವ ಮಳೆ ನೀರು ವ್ಯರ್ಥವಾಗದಂತೆ ಅದನ್ನು ಇಂಗಿಸುತ್ತ ಜಿಲ್ಲೆಯ ಎಲ್ಲಾ ತಾ.ಪಂ.ನ ಕಾರ್ಯನಿರ್ವಹಕ ಅಧಿಕಾರಿಗಳು ಮುಂದಾಗಬೇಕೆಂದರು. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಕೊಂಚಮಟ್ಟಿಗಾದರೂ ಪರಿಹಾರ ಕಾಣಲಿದೆ ಎಂದರು.
ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಸೂಚಿಸಿದ ಸಚಿವರು ಈ ದಿಸೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಕ್ಷೇತ್ರಗಳ ಶಾಸಕರು, ಜಿ.ಪಂ, ತಾ.ಪಂ, ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಈ ಹೊಸ ಯೋಜನೆಯ ಬಗ್ಗೆ ವಿಚಾರ ವಿನಿಮಯ ನಡೆಸಿ ಅವರ ಮನವೊಲಿಸಿ ಈ ಯೋಜನೆಯನ್ನು ಸಫಲಗೊಳಿಸುವತ್ತ ಅಧಿಕಾರಿಗಳು ಕಂಕಣಬದ್ಧರಾಗುವಂತೆ ಸೂಚನೆ ನೀಡಿದರು.
ಈ ಅಭಿಯಾನ ಕಾರ್ಯಕ್ರಮದಡಿ ಜಿಲ್ಲಾಧ್ಯಂತ 27,477 ಕಾಮಗಾರಿಗಳು ನಡೆಯುತ್ತಿದ್ದು, ಹೆಚ್.ಡಿ. ಕೋಟೆ 2,950, ಹುಣಸೂರು 4,868, ಕೆ.ಆರ್.ನಗರ 3,343, ಮೈಸೂರು 3,928, ನಂಜನಗೂಡು 4,575, ಸರಗೂರು 1,371, ಪಿರಿಯಾಪಟ್ಟಣದ 2,952, ಟಿ. ನರಸೀಪುರ 4,120 ಕಾಮಗಾರಿಗಳು ಚಾಲನೆಯಲ್ಲಿವೆ ಎಂದು ಜಿ.ಪಂ. ಸಿಇಒ ಸಭೆಗೆ ವಿವಿರ ನೀಡಿದರು.
ಜನ ಜೀವನ್ ಮಿಷನ್ ಯೋಜನೆಯಡಿ 2020-21ನೇ ಸಾಲಿನಲ್ಲಿ ಒಟ್ಟು 446 ಕಾಮಗಾರಿಗಳಿಗೆ ಅನುಮೋದನೆ ದೊರೆತ್ತಿದ್ದು, ಇದರಲ್ಲಿ 235 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ನೀರಾವರಿ ಇಲಾಖಾ ಅಧಿಕಾರಿ ಚಂದ್ರಶೇಖರ್ ಹೇಳಿದ್ದನ್ನು ಆಲಿಸಿದ ಸಚಿವರು ಉಳಿದ ಕಾಮಗಾರಿಗಳಿಗೆ ಈ ತಿಂಗಳ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಖಡಕ್ ಸೂಚನೆಯನ್ನು ಅಧಿಕಾರಿಗೆ ನೀಡಿದರು.
ಇದೇ ರೀತಿ 2021-22ನೇ ಸಾಲಿನಲ್ಲಿ 120 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಈ ವರ್ಷದ ಜೂನ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು, ಇದೇ ಅಕ್ಟೋಬರ್ ಅಂತ್ಯದೊಳಗೆ ಈ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಳ್ಳಬೇಕು. ಒಂದುವೇಳೆ ಈ ಕೆಲಸ ಸಾಧಿಸಲಾಗದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಚಿವರಿಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ದಿನಾಂಕ 31-03-2021ರ ವರೆಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯ ವರದಿಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ, ಟಿ. ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್‍ಕುಮಾರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಜಿ.ಪಂ. ಸಿಇಒ ಹಾಗೂ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಕಾರ್ಯರ್ನಿಹಣಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.