ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ: ಬಳ್ಳಾರಿ

ಬ್ಯಾಡಗಿ, ಆ 5: ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯು ಹೆಚ್ಚು ಮಹತ್ವದ್ದಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ 2021-22ಸಾಲಿನ ಅಮೃತ ಕಿರು ಉದ್ದಿಮೆ ಯೋಜನೆಯಡಿ ಆಯ್ಕೆಯಾದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಬೀಜಧನ ವಿತರಣೆ ಹಾಗೂ ಬಸವ ವಸತಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡುವ ಮೂಲಕ ತಲಾ ಒಂದು ಲಕ್ಷ ರೂ.ಗಳ ಸಹಾಯಧನದ ಚೆಕ್‍ಗಳನ್ನು ವಿತರಿಸಲಾಗುತ್ತಿದ್ದು, ಮಹಿಳಾ ಸ್ವಸಹಾಯ ಗುಂಪುಗಳು ತಾವು ಪಡೆದ ಬಂಡವಾಳವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದರು. ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಸಕಾಲಕ್ಕೆ ನಿರ್ಮಿಸಿಕೊಳ್ಳುವ ಫಲಾನುಭವಿಗಳು ತಮಗೆ ವಾಸವಿರಲು ಸೂರನ್ನು ಕಲ್ಪಿಸಿಕೊಂಡು ವಸತಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಡಾ. ಪಾರ್ವತೆಮ್ಮ ಹುಂಡೇಕಾರ ಮಾತನಾಡಿ, ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಯ್ದ 38 ಸ್ವಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂಗಳಂತೆ 38ಲಕ್ಷ ರೂಗಳನ್ನು ಬೀಜಧನ (ಕ್ಯಾಪಿಟಲ್ ಫಂಡ್) ವಿತರಿಸಲಾಗಿದೆ. ಹಾಳೆ ತಟ್ಟೆ ತಯಾರಿಕೆ, ಅಣಬೆ ಕೃಷಿ, ಬೇಕರಿ ತಿಂಡಿ ತಯಾರಿ, ಸೋಪ್ ಆಯಿಲ್, ಫಿನಾಯಿಲ್ ತಯಾರಿಕೆ ಮೊದಲಾದ ಚಟುವಟಿಕೆಗಳನ್ನು ಈ ಗುಂಪುಗಳು ಕೈಗೊಂಡಿದ್ದು, ಅವುಗಳಿಗೆ ಉತ್ತೇಜನ ನೀಡಲು ಈ ಸಹಾಯಧನ ವಿತರಿಸಲಾಗಿದೆ. ಇದನ್ನು ಮರುಪಾವತಿ ಮಾಡಬೇಕಾಗಿಲ್ಲ. ಯಾವ ಉದ್ದೇಶಕ್ಕೆ ಪ್ರಸ್ತಾವನೆ ಸಲ್ಲಿಸಿ ಪಡೆಯಲಾಗಿದೆಯೋ ಅದಕ್ಕೆ ಬಳಸಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಮಹಿಳೆಯರು ಕೀಳರಿಮೆ ತೊರೆದು ಸ್ವಸಹಾಯ ಸಂಘ ರಚಿಸಿಕೊಳ್ಳುವ ಮೂಲಕ ಆದಾಯ ಬರುವ ಉದ್ಯೋಗ ಸೃಷ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯೆ ಕವಿತಾ ಸೊಪ್ಪಿನಮಠ, ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ತಾಬಿಜೆಪಿ ಅಧ್ಯಕ್ಷ ಹಾಲೇಶ ಜಾಧವ, ಮುಖಂಡರಾದ ಶಿವಬಸಪ್ಪ ಕುಳೇನೂರ, ವಿದ್ಯಾಶೆಟ್ಟಿ, ಎಸ್.ಎನ್.ಯಮನಕ್ಕನವರ, ಶಿವಪ್ಪ ಕುಮ್ಮೂರ, ವಿಜಯಭರತ್ ಬಳ್ಳಾರಿ, ಸುರೇಶ ಆಸಾದಿ, ಟಿಇಓ ಎನ್.ತಿಮ್ಮಾರೆಡ್ಡಿ, ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ವಸತಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.