ಯೋಜನೆಗಳ ಸೌಲಭ್ಯ ಎಲ್ಲರಿಗೂ ತಲುಪಲಿ : ನಾಡಗೌಡ್ರ

ಗದಗ,ಜ14: ಪ್ರಧಾನ ಮಂತ್ರಿ ಮಾತೃವಂದನ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯ ಮಹಿಳೆಯರು ಮತ್ತು ಮಕ್ಕಳಿಗೆ ಸಮರ್ಪಕವಾಗಿ ಅರ್ಹರೆಲ್ಲರಿಗೂ ದೊರೆಯುವಂತಾಗಬೇಕು ಎಂದು ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಈರಪ್ಪ ನಾಡಗೌಡ್ರ ಅವರು ಹೇಳಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಮೇಲ್ವಿಚಾರಕಿಯರಿಗೆ ಏರ್ಪಡಿಸಲಾಗಿದ್ದ ಪ್ರಧಾನ ಮಂತ್ರಿ ಮಾತೃವಂದನ ಯೋಜನೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಇಲಾಖೆಯ ಯೋಜನೆಗಳಾದ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಬರುವ ಉದ್ಯೋಗಿನಿ, ಮಕ್ಕಳ ರಕ್ಷಣಾ ಘಟಕದಲ್ಲಿನ ಬಾಲ್ಯ ವಿವಾಹ ನಿಷೇಧ, ಬಾಲಕರ ಹಾಗೂ ಬಾಲಕಿಯರ ಬಾಲಮಂದಿರ ಪ್ರಗತಿ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಗದಗ ಜಿಲ್ಲೆಯಲ್ಲಿನ ಯಾವೊಬ್ಬ ವಿಕಲಚೇತನರೂ ಇಲಾಖೆಯ ಸೌಲಭ್ಯಗಳ ಅವಕಾಶದಿಂದ ವಂಚಿತರಾಗದಂತೆ ಸೂಕ್ತ ಕ್ರಮ ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ತಲುಪಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಮಾತನಾಡಿ ಇಲಾಖೆಯ ಯೋಜನೆಗಳು ಜನಸಾಮಾನ್ಯರಿಗೆ ಸಮಯಕ್ಕೆ ಸರಿಯಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ ಪ್ರಾಮಾಣಿಕ ಶ್ರಮ ಅಗತ್ಯವಾಗಿದೆ. ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಮಹಿಳಾ ಇಲಾಖೆಯ ಯೋಜನೆಗಳು ಸುಲಭವಾಗಿ ದೊರಕುವಂತೆ ಯೋಜನೆಗಳನ್ನು ರೂಪಿಸಿ, ಕಾರ್ಯನಿರ್ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಲ್ಲಿರುವ ಹಲವಾರು ಯೋಜನೆಗಳ ಕುರಿರು ಅಂಗನವಾಡಿ ಮೇಲ್ವಿಚಾರಕಿಯರು ಅರಿತುಕೊಂಡು ತಮ್ಮ ತಮ್ಮ ಅಂಗನವಾಡಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರುವು ಮೂಡಿಸುವದರೊಂದಿಗೆ ಸರ್ಕಾರದ ಸೌಲಭ್ಯಗಳು ದೊರಕುವಂತೆ ಕೆಲಸ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಶ್ರೀಮತಿ ಡಾ. ಎಚ್.ಎಚ್. ಕುಕನೂರ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲೆಯ ಎಲ್ಲ ಅಂಗನವಾಡಿ ಮೇಲ್ವಿಚಾರಕಿಯರು ಇದ್ದರು.